ಕೋಲಾರ, ಜೂ. 30: ಕುರಿ ಕಳವು ಮಾಡಲು ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗಿದ್ದ ಮೂವರು ಆರೋಪಿಗಳ ಪೈಕಿ ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ಉಳಿದ ಇಬ್ಬರು ಸ್ಥಳದಿಂದ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಎಬ್ಬಿರಿ ಗ್ರಾಮದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಚಿನ್ನಕೋಟೆ ಗ್ರಾಮದ ರಾಘವೇಂದ್ರ (36) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವೆಪನಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗೆ ಬಯಲಾಯ್ತು ಕಳವು ಯತ್ನ?
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ರಾಘವೇಂದ್ರ ತನ್ನ ಇಬ್ಬರು ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ಎಬ್ಬಿರಿ ಗ್ರಾಮಕ್ಕೆ ತೆರಳಿ, ಗ್ರಾಮದ ನಿವಾಸಿ ಸುಂದರಪ್ಪ ಅವರಿಗೆ ಸೇರಿದ ಕುರಿಗಳ ಹಟ್ಟಿಯಿಂದ ಕುರಿಗಳನ್ನು ಕಳವು ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಹಟ್ಟಿಯಲ್ಲೇ ಮಲಗಿದ್ದ ಸುಂದರಪ್ಪ ಶಬ್ದ ಕೇಳಿ ಎಚ್ಚರಗೊಂಡು ಜೋರಾಗಿ ಕೂಗಿದ್ದಾರೆ. ಅವರ ಕೂಗಾಟ ಕೇಳಿ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಒಬ್ಬ ಸಿಕ್ಕಿಬಿದ್ದ, ಇಬ್ಬರು ಪರಾರಿ
ಗ್ರಾಮಸ್ಥರನ್ನು ಕಂಡ ತಕ್ಷಣ ಆರೋಪಿಗಳಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಆದರೆ ರಾಘವೇಂದ್ರ ತಪ್ಪಿಸಿಕೊಳ್ಳಲು ವಿಫಲನಾಗಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಆರೋಪಿಗೆ ಧರ್ಮದೇಟು ನೀಡಿ ಬಳಿಕ ವೆಪನಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪರಾರಿಯಾದವರಿಗಾಗಿ ಬಲೆ
ಪ್ರಕರಣ ದಾಖಲಿಸಿಕೊಂಡಿರುವ ವೆಪನಪಲ್ಲಿ ಪೊಲೀಸರು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ವಿಶೇಷ ಶೋಧ ಕಾರ್ಯ ಆರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿರುವ ಜಾನುವಾರು ಕಳವು ಯತ್ನಗಳು ರೈತರಲ್ಲಿ ಆತಂಕ ಮೂಡಿಸಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸ್ಥಳೀಯರು ಆಗ್ರಹಿpಸಿದ್ದಾರೆ.
Tags:#Kolar #Bangarpet #Ebberi #SheepTheft #CrimeNews #KarnatakaCrime #Police #Raghavendra #VillageNews #BreakingNews #KolarNews #KarnatakaNews #KarunaaduTimes #wwwKarunaaduTimes.com #ಕೋಲಾರ #ಬಂಗಾರಪೇಟೆ #ಕುರಿಕಳವು #ಅಪರಾಧಸುದ್ದಿ #ಗ್ರಾಮಸ್ಥರು #ಪೊಲೀಸರು #ವೆಪನಪಲ್ಲಿಪೊಲೀಸ್ #ಬ್ರೇಕಿಂಗ್ನ್ಯೂಸ್ #ಕರ್ನಾಟಕಸುದ್ದಿ #ಕರನಾಡುಟೈಮ್ಸ್ #KarunaaduTimes