ರಾಮನಗರ, ಜೂ. 30: ಏಳು ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿರುವ ರಾಮನಗರದ ವಿಶೇಷ ನ್ಯಾಯಾಲಯ, 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಎರಡು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
ಪ್ರಕರಣವು 2021ರ ಡಿಸೆಂಬರ್ 26ರಂದು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಳೂರುಪಟ್ಟಣ ಗ್ರಾಮದಲ್ಲಿ ನಡೆದಿತ್ತು. ದೂರುದಾರರ ಏಳು ವರ್ಷದ ಪುತ್ರನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನಾಗೇಂದ್ರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ಚನ್ನಪಟ್ಟಣ ಗ್ರಾಮಾಂತರ ವೃತ್ತದ ಸಿಪಿಐ ಟಿ.ಬಿ. ಶಿವಕುಮಾರ್ ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ರಾಮನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೋಕ್ಸೊ ವಿಶೇಷ ನ್ಯಾಯಾಲಯ) ನ್ಯಾಯಾಧೀಶೆ ಶ್ರೀಮತಿ ಎಂ. ಪಂಚಾಕ್ಷರಿ ಅವರು, ಆರೋಪದ ವಿರುದ್ಧ ಸಲ್ಲಿಕೆಯಾಗಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಯನ್ನು ತಪ್ಪಿತಸ್ಥನೆಂದು ತೀರ್ಮಾನಿಸಿದರು.
ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಎರಡು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಮೀನಾ ಕುಮಾರಿ ಎನ್. ವಾದ ಮಂಡಿಸಿದ್ದರು. ತನಿಖಾಧಿಕಾರಿಗಳಾದ ಟಿ.ಬಿ. ಶಿವಕುಮಾರ್, ಬಿ.ಕೆ. ಪ್ರಕಾಶ್, ಪಿಎಸ್ಐ ಮನೋಹರ್ ಬಿ., ಹಾಗೂ ಪೊಲೀಸ್ ಸಿಬ್ಬಂದಿ ನಾಗಯ್ಯ ಹಿರೇಮಠ ಮತ್ತು ವೀರೇಶ್ ಗಂಡ್ಲುಮನಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಸೇರಿದಂತೆ ವಿಚಾರಣೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ತೀರ್ಪು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Tags: Ramanagara #Channapatna #POCSO #POCSOCase #ChildSafety #CrimeNews #CourtVerdict #Justice #KarnatakaPolice #RamanagaraCourt #KarnatakaNews #BreakingNews #KarunaaduTimes #wwwKarunaaduTimes.com #ರಾಮನಗರ #ಚನ್ನಪಟ್ಟಣ #ಪೋಕ್ಸೊ #ಲೈಂಗಿಕದೌರ್ಜನ್ಯ #ಮಕ್ಕಳಸುರಕ್ಷತೆ #ನ್ಯಾಯಾಲಯ #20ವರ್ಷಜೈಲು #ಕರ್ನಾಟಕಪೊಲೀಸ್ #ಅಪರಾಧಸುದ್ದಿ #ಬ್ರೇಕಿಂಗ್ನ್ಯೂಸ್ #KarunaaduTimes