ರಾಮನಗರ, ಜೂ. 30: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು. ಕಾನೂನಿನಲ್ಲಿ ನಿಗದಿಪಡಿಸಿರುವಂತೆ 60 ದಿನಗಳೊಳಗೆ ಅಥವಾ ಸಾಧ್ಯವಾದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಅಧಿನಿಯಮ-2015ರ ಅನುಷ್ಠಾನ ಕುರಿತ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ದಾಖಲಾಗುವ ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ತನಿಖೆಯ ಅವಧಿ ಬದಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಎರಡೇ ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲಾಗಿದ್ದು, ಸಂಕೀರ್ಣ ಪ್ರಕರಣಗಳಲ್ಲೂ ಕಾನೂನಿನಲ್ಲಿ ನಿಗದಿಪಡಿಸಿರುವ 60 ದಿನಗಳ ಗಡುವಿನೊಳಗೆ ತನಿಖೆ ಪೂರ್ಣಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ಪರಿಹಾರ ನೀಡಲು ಎಫ್ಐಆರ್ ತಕ್ಷಣ ಕಳುಹಿಸಿ
ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ ಪರಿಹಾರವನ್ನು ವಿಳಂಬವಿಲ್ಲದೆ ತಲುಪಿಸಲು, ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಅದರ ಪ್ರತಿಯನ್ನು ಸಂಬಂಧಿತ ಪೊಲೀಸ್ ಠಾಣೆಗಳು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಹುಲಿಕಲ್ ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಶೀಘ್ರ
ಪರಿಸರ ರಾಯಭಾರಿ ಸಾಲು ಮರದ ತಿಮ್ಮಕ್ಕ ಅವರ ಊರಾದ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿರುವ ಎಸ್ಸಿ/ಎಸ್ಟಿ ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ನೋಂದಣಿ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆ, ವಲಸಿಗರು ಹಾಗೂ ಶಿಕ್ಷಣ ಇಲಾಖೆಗೆ ಸೂಚನೆ
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆಸ್ಪತ್ರೆಗಳ ಸ್ವಚ್ಛತೆ, ವೈದ್ಯರು ಹಾಗೂ ಸಿಬ್ಬಂದಿಯ ಸಮಯಪಾಲನೆ, ಕಾಮ್ಸ್ (KAMS) ಆ್ಯಪ್ ಮೂಲಕ ಹಾಜರಾತಿ, ಆಂಬುಲೆನ್ಸ್ಗಳ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೊರ ಜಿಲ್ಲೆಗಳಿಂದ ಕೂಲಿಗಾಗಿ ಬರುವ ವಲಸಿಗರಿಗೆ ಸ್ಥಳೀಯ ಸಂಸ್ಥೆಗಳು ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಆರ್ಟಿಇ ನಿಯಮ ಉಲ್ಲಂಘಿಸುವ ಖಾಸಗಿ ಶಾಲೆಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದರು.
ಮಾಗಡಿಯ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಅಗತ್ಯ ಭದ್ರತಾ ಸೌಲಭ್ಯ ಕಲ್ಪಿಸುವುದು ಹಾಗೂ ಹಾರೋಹಳ್ಳಿಯಲ್ಲಿ ಸ್ಮಶಾನಕ್ಕೆ ಅಗತ್ಯ ಭೂಮಿ ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಉಪವಿಭಾಗಾಧಿಕಾರಿ ಬಿನೋಯ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Tags:#Ramanagara #ರಾಮನಗರ #SCSTAct #SCSTAtrocities #DistrictCollector #YashwanthVGurukar #Police #Justice #KarnatakaNews #DalitRights #SocialJustice #RamanagaraNews #Karnataka #MysoreUniversity #BVAAdmission #CAVA #VisualArts #Admission2026 #UUCMS #EducationNews #KarnatakaEducation #ಕರ್ನಾಟಕಸುದ್ದಿ #ರಾಮನಗರಸುದ್ದಿ #ಎಸ್ಸಿಎಸ್ಟಿ #ದೌರ್ಜನ್ಯಪ್ರಕರಣ #ಮೈಸೂರುವಿಶ್ವವಿದ್ಯಾಲಯ #ಪ್ರವೇಶಾತಿ #ದೃಶ್ಯಕಲೆ #ವಿದ್ಯಾರ್ಥಿಗಳು #ಕರ್ನಾಟಕವಾರ್ತೆ