ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಆಪರೇಷನ್ ಥಿಯೇಟರ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಆಪರೇಷನ್ ಥಿಯೇಟರ್ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳು ಹಾಗೂ ಇತರೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದ್ದು, ಸುತ್ತಮುತ್ತಲಿನ ಕೊಠಡಿಗಳಿಗೂ ಹಾನಿಯಾಗಿದೆ.
ಬೆಂಕಿ ಹೊತ್ತಿಕೊಂಡ ತಕ್ಷಣ ಆಪರೇಷನ್ ಥಿಯೇಟರ್ನೊಳಗೆ ದಟ್ಟ ಹೊಗೆ ಆವರಿಸಿತು. ಇದರಿಂದ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ಕೂಡಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಸ್ಥಳವನ್ನು ಖಾಲಿ ಮಾಡಿದರು.
ಘಟನೆಯ ಕುರಿತು ಮಾತನಾಡಿದ ಆಸ್ಪತ್ರೆ ಸಿಬ್ಬಂದಿ, "ಆ ಸಂದರ್ಭದಲ್ಲಿ ಆಪರೇಷನ್ ಥಿಯೇಟರ್ನಲ್ಲಿ ರೋಗಿಗಳಿರಲಿಲ್ಲ. ಕೆಲ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದೆವು. ಏಕಾಏಕಿ ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲರೂ ಸುರಕ್ಷಿತವಾಗಿ ಹೊರಬಂದೆವು. ಡಿ-ಗ್ರೂಪ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಬೆಂಕಿ ನಿಯಂತ್ರಿಸಲು ಮುಂದಾದರು. ಅವರ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ" ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದ ಅಗ್ನಿ ನಂದಿಸುವ ಸಿಲಿಂಡರ್ಗಳು ಹಾಗೂ ಫೈರ್ ಬಾಲ್ಗಳ ನೆರವಿನಿಂದ ಡಿ-ಗ್ರೂಪ್ ಸಿಬ್ಬಂದಿ ಆರಂಭಿಕ ಹಂತದಲ್ಲೇ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಿದರು. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಈ ಅವಘಡದಲ್ಲಿ ಯಾವುದೇ ರೋಗಿ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಆದರೆ ಆಪರೇಷನ್ ಥಿಯೇಟರ್ನಲ್ಲಿದ್ದ ದುಬಾರಿ ವೈದ್ಯಕೀಯ ಉಪಕರಣಗಳಿಗೆ ವ್ಯಾಪಕ ಹಾನಿಯಾಗಿರುವುದಾಗಿ ತಿಳಿದುಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, "ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಬೆಸ್ಕಾಂ ವರದಿ ಆಧರಿಸಿ ಬೆಂಕಿಗೆ ನಿಖರ ಕಾರಣ ಪತ್ತೆ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡಿರುವ ಶಂಕೆ ಇದೆ. ಇದು ತಾಂತ್ರಿಕ ದೋಷವೇ, ಮಾನವ ನಿರ್ಲಕ್ಷ್ಯವೇ ಅಥವಾ ಬೇರೆ ಕಾರಣವೇ ಎಂಬುದನ್ನು ತನಿಖೆಯ ಬಳಿಕ ಸ್ಪಷ್ಟಪಡಿಸಲಾಗುವುದು. ಹಾನಿಗೊಳಗಾದ ಆಪರೇಷನ್ ಥಿಯೇಟರ್ ಅನ್ನು ಒಂದು ವಾರದೊಳಗೆ ದುರಸ್ತಿ ಮಾಡಿ ಮತ್ತೆ ಕಾರ್ಯಾರಂಭಗೊಳಿಸಲಾಗುವುದು" ಎಂದು ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಆಸ್ಪತ್ರೆಯ ಸುರಕ್ಷತಾ ವ್ಯವಸ್ಥೆಗಳನ್ನೂ ಪರಿಶೀಲಿಸಲಾಗುತ್ತಿದೆ.
Tags:#Davangere #ChigateriHospital #DavangereDistrictHospital #OxygenCylinderExplosion #OperationTheatreFire #HospitalFire #FireAccident #KarnatakaNews #DavangereNews #BreakingNews #FireDepartment #DistrictHospital #GangadharSwamy #HospitalSafety #MedicalEquipment #Karnataka #KannadaNews #KarunaduTimes