ಯಾದಗಿರಿ, ಜೂ.30: ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಸಹಕಾರಿ ಬ್ಯಾಂಕ್ನಲ್ಲಿ ಕೋಟ್ಯಂತರ ರೂಪಾಯಿ ಹಣದ ಅವ್ಯವಹಾರ ಆರೋಪದ ಹಿನ್ನೆಲೆ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್ನ ಅಧ್ಯಕ್ಷ ಬಸನಗೌಡ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಚಲನ ಮೂಡಿಸಿದೆ. ಆತ್ಮಹತ್ಯೆಗೂ ಮುನ್ನ ಅವರು ಮೂರು ಪುಟಗಳ ಡೆತ್ನೋಟ್ ಬರೆದು, ತಮ್ಮ ಹೇಳಿಕೆಯನ್ನು ಒಳಗೊಂಡ ವಿಡಿಯೋ ಸಂದೇಶವನ್ನೂ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬ್ಯಾಂಕ್ನಲ್ಲಿ ಸುಮಾರು ₹6.62 ಕೋಟಿ ಹಣದ ಅಕ್ರಮ ವ್ಯವಹಾರ ನಡೆದಿರುವ ಆರೋಪ ಕೆಲ ತಿಂಗಳಿನಿಂದ ಕೇಳಿಬರುತ್ತಿತ್ತು. ಈ ಪ್ರಕರಣದಲ್ಲಿ ಬಸನಗೌಡ ಪಾಟೀಲ ಅವರ ಹೆಸರೂ ಕೇಳಿಬಂದಿದ್ದರೂ, ಹಣಕಾಸಿನ ದುರುಪಯೋಗಕ್ಕೆ ತಮ್ಮ ಸಹಿಯನ್ನು ನಕಲಿ ಮಾಡಿ ಬಳಸಲಾಗಿದೆ ಎಂದು ಅವರು ಈ ಹಿಂದೆಯೇ ದೂರು ದಾಖಲಿಸಿದ್ದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧವೇ ದೂರು
ಕಳೆದ ಏಪ್ರಿಲ್ 13ರಂದು ಬಸನಗೌಡ ಪಾಟೀಲ ಅವರು ಶಹಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಬ್ಯಾಂಕ್ನ ಸಿಇಒ ರವಿಕೀರಣರೆಡ್ಡಿ, ಸಹಾಯಕ ವ್ಯವಸ್ಥಾಪಕ ವೆಂಕಟರೆಡ್ಡಿ ಹೊಸಮನಿ ಹಾಗೂ ಪಿಗ್ಮಿ ಸಂಗ್ರಹಕಾರ ಸಂಗಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಮ್ಮ ಸಹಿಯನ್ನು ನಕಲಿ ಮಾಡಿ ಕೋಟ್ಯಂತರ ರೂಪಾಯಿ ಸಾಲವನ್ನು ಅಕ್ರಮವಾಗಿ ಬಿಡುಗಡೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಬೆಳವಣಿಗೆಯ ಬಳಿಕ ಆತಂಕಗೊಂಡ ಠೇವಣಿದಾರರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿ ತಮ್ಮ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಈ ಸಂದರ್ಭ ಬಸನಗೌಡ ಕೆಲವು ದಿನಗಳ ಕಾಲ ಊರು ಬಿಟ್ಟು ತೆರಳಿದ್ದು, ಇತ್ತೀಚೆಗೆ ಮಾತ್ರ ಮನೆಗೆ ಮರಳಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಡಿಯೋ ಸಂದೇಶದಲ್ಲಿ ವ್ಯಕ್ತವಾದ ನೋವು
ಸಾವಿಗೂ ಮುನ್ನ ದಾಖಲಿಸಿದ ವಿಡಿಯೋದಲ್ಲಿ ಬಸನಗೌಡ ಪಾಟೀಲ, ಬ್ಯಾಂಕ್ನಲ್ಲಿ ನಡೆದ ಅವ್ಯವಹಾರದಿಂದ ತಾವು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿಕೊಂಡಿದ್ದಾರೆ.
ಠೇವಣಿದಾರರಿಗೆ ನಿಗದಿತ ಅವಧಿಯಲ್ಲಿ ಹಣ ಹಿಂತಿರುಗಿಸುವ ಭರವಸೆ ನೀಡಲಾಗಿತ್ತು. ಆದರೆ ಹಣ ದುರುಪಯೋಗಪಡಿಸಿಕೊಂಡವರು ಮೊತ್ತವನ್ನು ವಾಪಸ್ ಜಮೆ ಮಾಡದ ಕಾರಣ ಆ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ತಾವು ತಮ್ಮ ಪಾಲಿನ ಎಲ್ಲಾ ಸಾಲದ ಮೊತ್ತವನ್ನು ಹಿರಿಯರ ಸಮ್ಮುಖದಲ್ಲಿ ಒಪ್ಪಿಸಿದ್ದರೂ, ಉಳಿದವರು ಹಣ ಮರುಪಾವತಿಸದ ಕಾರಣ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ. ಠೇವಣಿದಾರರಿಗೆ ಹಣ ಮರಳಿಸಲಾಗದ ನೋವು, ಸಾರ್ವಜನಿಕ ಅವಮಾನ ಹಾಗೂ ಕುಟುಂಬದ ಮೇಲೆ ಉಂಟಾದ ಒತ್ತಡದಿಂದ ತೀವ್ರವಾಗಿ ಮನನೊಂದಿದ್ದಾಗಿ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ಕುಟುಂಬದವರಿಗೆ ಕೆಲವರು ಕಿರುಕುಳ ನೀಡುತ್ತಿರುವುದರಿಂದ ಅವರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಮನವಿ ಮಾಡಿಕೊಂಡಿರುವ ಅವರು, ಬಡ ಠೇವಣಿದಾರರಿಗೆ ಉಂಟಾದ ಸಂಕಷ್ಟಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಎಲ್ಲರಿಗೂ ಹಣ ಮರಳುವಂತಾಗಲಿ ಎಂದು ತಮ್ಮ ಕುಲದೇವತೆಯನ್ನು ಪ್ರಾರ್ಥಿಸಿರುವುದಾಗಿಯೂ ತಿಳಿಸಿದ್ದಾರೆ.
ತನಿಖೆ ಮುಂದುವರಿಕೆ
ಘಟನೆಗೆ ಸಂಬಂಧಿಸಿದಂತೆ ಶಹಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡೆತ್ನೋಟ್ ಹಾಗೂ ವಿಡಿಯೋವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್ನ ಹಣಕಾಸು ಅವ್ಯವಹಾರ ಹಾಗೂ ಆತ್ಮಹತ್ಯೆಯ ನಡುವಿನ ಸಂಬಂಧದ ಕುರಿತು ತನಿಖೆ ಮುಂದುವರಿದಿದೆ.
Tags:#Yadagiri #Shahapur #CooperativeBank #BankScam #BasanagoudaPatil #HemareddyMallammaBank #BankFraud #KarnatakaNews #YadagiriNews #ShahapurNews #CooperativeSociety #Depositors #CrimeNews #BreakingNews #KannadaNews #KarunaduTimes #BankMisappropriation #PoliceInvestigation #DeathNote #VideoMessage