ನಂದಿನಿ ಮಿಲ್ಕ್ ಪಾರ್ಲರ್ಗೆ ಬೆಂಕಿ; ಆಘಾತ ತಾಳಲಾರದೆ ಮಾಲೀಕ ಹೃದಯಾಘಾತದಿಂದ ಸಾವು
ಚಿಕ್ಕಬಳ್ಳಾಪುರ, ಜೂ. 30: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ ಇರುವ ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡ ದುರಂತಕ್ಕೆ ಕಾರಣವಾಗಿದ್ದು, ಅಂಗಡಿ ಮಾಲೀಕ ಆಘಾತದಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಣಜೇನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ (55) ಮೃತರು. ಹಲವು ವರ್ಷಗಳಿಂದ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ಅವರು, ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದರು.
ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಂದಿಸಲು ಯಶಸ್ವಿಯಾದರೂ, ಘಟನೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ವೆಂಕಟೇಶ್ ಕೆಲವೇ ಕ್ಷಣಗಳಲ್ಲಿ ಅಂಗಡಿ ಮುಂಭಾಗದಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಪ್ರಯತ್ನಿಸಿದರೂ, ಅಷ್ಟರಲ್ಲೇ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿ ಅವಘಡದಿಂದ ಪಾರ್ಲರ್ನಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇತರ ತಾಂತ್ರಿಕ ಕಾರಣಗಳ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಅಕಾಲಿಕವಾಗಿ ವೆಂಕಟೇಶ್ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ. ಘಟನೆಯ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Tags:#Chikkaballapura #NandiniMilkParlour #FireAccident #HeartAttack #Venkatesh #BreakingNews #ChikkaballapuraNews #KarnatakaNews #FireIncident #LocalNews #KannadaNews #KarunaaduTimes #TragicIncident #NandiniMilkParlourFire