ಹಾಸನ, ಜೂ. 30: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ನಡೆಸಿದ್ದಾರೆ ಎಂಬ ಆರೋಪಗಳ ನಡುವೆಯೇ, ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕುವ ಉದ್ದೇಶದಿಂದ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಲು ಮಂಗಳವಾರ ಪ್ರಯಾಣ ಬೆಳೆಸಿದರು.
ಧರ್ಮಸ್ಥಳಕ್ಕೆ ತೆರಳುವ ಮೊದಲು ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ದೇವಾಲಯದ ಆವರಣದಲ್ಲಿರುವ ಬಲಿಕಲ್ಲಿನ ಬಳಿ ತಾವು ಯಾವುದೇ ಅಡ್ಡ ಮತದಾನ ಮಾಡಿಲ್ಲ ಎಂದು ಆಣೆ-ಪ್ರಮಾಣ ಮಾಡಿದರು. ಬಳಿಕ ಕರ್ಪೂರ ಬೆಳಗಿ, ನೂರಾರು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಧರ್ಮಸ್ಥಳದತ್ತ ಹೊರಟರು.
ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಶಾಸಕ ಹೆಚ್.ಕೆ. ಸುರೇಶ್ ವಿರುದ್ಧ ಕ್ರಾಸ್ ವೋಟಿಂಗ್ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಅವರು, "ನಾನು ಯಾವುದೇ ಅಡ್ಡ ಮತದಾನ ಮಾಡಿಲ್ಲ. ಅಗತ್ಯವಿದ್ದರೆ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುತ್ತೇನೆ" ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.
ತಮ್ಮ ಹೇಳಿಕೆಯಂತೆ ಇದೀಗ ಧರ್ಮಸ್ಥಳಕ್ಕೆ ತೆರಳಿ ದೇವರ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡಲು ಮುಂದಾಗಿದ್ದಾರೆ. ಈ ಬೆಳವಣಿಗೆ ಹಾಸನ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
Tags:#HKSuresh #Belur #Hassan #Dharmasthala #SriManjunathSwamy #CrossVoting #MLC_Election #BJPKarnataka #KarnatakaPolitics #BelurNews #HassanNews #PoliticalNews #BreakingNews #KannadaNews #KarunaaduTimes