ಬೆಂಗಳೂರು:ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಸರಳ ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ, ಈ ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
ಬಿಳಿ ಹೂವುಗಳಿಂದ ಅಲಂಕರಿಸಲ್ಪಟ್ಟ ಆಕರ್ಷಕ ವೇದಿಕೆಯಲ್ಲಿ ನಡೆದ ಈ ಖಾಸಗಿ ಸಮಾರಂಭದಲ್ಲಿ ಕುಟುಂಬದವರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಿನಿತಾರೆಯರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ನಿಶ್ಚಿತಾರ್ಥದ ಬಳಿಕ ಮಾತನಾಡಿದ ಶರ್ಮಿಳಾ ಮಾಂಡ್ರೆ, "ಇದು ನಮ್ಮ ಜೀವನದ ಅತ್ಯಂತ ಸುಂದರ ಮತ್ತು ವಿಶೇಷ ಕ್ಷಣ. ನಮ್ಮ ಮೇಲೆ ಪ್ರೀತಿ, ಆಶೀರ್ವಾದ ಮತ್ತು ಶುಭಹಾರೈಕೆಗಳನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಹೊಸ ಜೀವನದ ಪಯಣವನ್ನು ನಾವು ಸಂತೋಷದಿಂದ ಎದುರು ನೋಡುತ್ತಿದ್ದೇವೆ" ಎಂದು ಭಾವುಕರಾಗಿ ತಿಳಿಸಿದ್ದಾರೆ.
ಸುಧನ್ ಸುಂದರಂ ಕೂಡ ತಮ್ಮ ಸಂತಸವನ್ನು ವ್ಯಕ್ತಪಡಿಸಿ, "ನಮ್ಮ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳು ನೀಡುತ್ತಿರುವ ಪ್ರೀತಿ ಹಾಗೂ ಬೆಂಬಲಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ" ಎಂದು ಹೇಳಿದ್ದಾರೆ.
ಶರ್ಮಿಳಾ ಸಿನಿ ಪಯಣ
2007ರಲ್ಲಿ ಬಿಡುಗಡೆಯಾದ 'ಸಜನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದ ಶರ್ಮಿಳಾ ಮಾಂಡ್ರೆ, ಬಳಿಕ 'ಕೃಷ್ಣ', 'ನವಗ್ರಹ', 'ಸ್ವಯಂವರ', 'ಆಕೆ', 'ಗಾಳಿಪಟ 2', 'ಪೌಡರ್', 'ಡೆವಿಲ್' ಸೇರಿದಂತೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದ್ದಾರೆ. ನಟಿಯಾಗಿ ಮಾತ್ರವಲ್ಲದೆ Sharmiela Mandre Productions ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದು, ವಿಭಿನ್ನ ಕಥಾಹಂದರದ ಸಿನಿಮಾಗಳಿಗೆ ಉತ್ತೇಜನ ನೀಡುತ್ತಿದ್ದಾರೆ.
ಯಾರು ಸುಧನ್ ಸುಂದರಂ?
ಸುಧನ್ ಸುಂದರಂ ಅವರು ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, Passion Studios ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಅವರ ನಿರ್ಮಾಣದಲ್ಲಿ 'ಕಪ್ಪಲ್', 'ನಿಬುಣನ್', 'ಸೀತಕಾತಿ', 'ಅನಬೆಲ್ ಸೇತುಪತಿ', ರಾಷ್ಟ್ರ ಪ್ರಶಸ್ತಿ ವಿಜೇತ 'ಪಾರ್ಕಿಂಗ್' ಹಾಗೂ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳು ನಿರ್ಮಾಣವಾಗಿವೆ.
ಶರ್ಮಿಳಾ ಮತ್ತು ಸುಧನ್ ಅವರ ನಿಶ್ಚಿತಾರ್ಥದ ಸುದ್ದಿ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಸಂತಸದ ವಾತಾವರಣವನ್ನು ಮೂಡಿಸಿದ್ದು, ಅಭಿಮಾನಿಗಳು ಜೋಡಿಗೆ ಹೊಸ ಜೀವನಕ್ಕೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
Tags:#SharmielaMandre #SudhanSundaram #Engagement #KannadaCinema #Sandalwood #TamilCinema #PassionStudios #CelebrityEngagement #KannadaActress #FilmNews #EntertainmentNews #KannadaNews #KarunaaduTimes #LatestNews #ViralNews #SandalwoodNews