ದಿಸ್ಪುರ್: ಅರುಣಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಅಸ್ಸಾಂನ ಹಲವು ಜಿಲ್ಲೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ನದಿಗಳ ನೀರಿನ ಮಟ್ಟ ಅಪಾಯದ ಗಡಿ ದಾಟಿರುವ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, 22,000ಕ್ಕೂ ಹೆಚ್ಚು ಮಂದಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಆರು ಜಿಲ್ಲೆಗಳಲ್ಲಿ ಪ್ರವಾಹದ ತೀವ್ರ ಪರಿಣಾಮ
ಧೇಮಾಜಿ, ನಲ್ಬಾರಿ, ದಿಬ್ರುಗಢ್, ಚಿರಾಂಗ್, ಲಖಿಂಪುರ್ ಹಾಗೂ ಕೊಕ್ರಾಜಾರ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಒಟ್ಟು 22,124 ಜನರು ಪ್ರವಾಹದಿಂದ ಬಾಧಿತರಾಗಿದ್ದು, ಅವರಲ್ಲಿ ಧೇಮಾಜಿ ಜಿಲ್ಲೆಯಲ್ಲಿ ಮಾತ್ರ 15,483ಕ್ಕೂ ಹೆಚ್ಚು ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ.
ರೈಲ್ವೆ ಸೇತುವೆಗೆ ಹಾನಿ; ರೈಲು ಸಂಚಾರ ಸ್ಥಗಿತ
ಭಾರೀ ಪ್ರವಾಹ ಮತ್ತು ನದಿ ದಂಡೆಯ ಸವೆತದಿಂದ ಅರ್ಚಿಪಥರ್–ಸಿಮೆನ್ ಚಾಪರಿ ನಡುವಿನ ಪ್ರಮುಖ ರೈಲ್ವೆ ಸೇತುವೆಯ ಒಂದು ಪಿಲ್ಲರ್ ದುರ್ಬಲಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುರ್ಕೋಂಗ್ಸೆಲೆಕ್–ಸಿಲಾಪಥರ್ ಮಾರ್ಗದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಈಶಾನ್ಯ ಗಡಿ ರೈಲ್ವೆ ತಿಳಿಸಿದೆ.
1965ರಲ್ಲಿ ನಿರ್ಮಿಸಲಾದ ಈ ಸೇತುವೆ ವರ್ಷಗಳ ಕಾಲ ಸುರಕ್ಷಿತವಾಗಿದ್ದರೂ, ಈ ಬಾರಿ ಉಂಟಾದ ಭಾರಿ ಮಳೆ ಮತ್ತು ಪ್ರವಾಹದಿಂದ ನದಿ ದಂಡೆ ಕೊಚ್ಚಿಹೋಗಿ ಪಿಲ್ಲರ್ಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ರೈಲು ಅಪಘಾತ ಸಂಭವಿಸಿಲ್ಲ ಮತ್ತು ಯಾವುದೇ ಜೀವಹಾನಿ ವರದಿಯಾಗಿಲ್ಲ.
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಧೇಮಾಜಿ, ಸಿಲಾಪಥರ್ ಹಾಗೂ ಮುರ್ಕೋಂಗ್ಸೆಲೆಕ್ ನಿಲ್ದಾಣಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿದೆ.
96 ಹಳ್ಳಿಗಳು ಜಲಾವೃತ, ಬೆಳೆ-ಜಾನುವಾರುಗಳಿಗೆ ಭಾರೀ ಹಾನಿ
ಪ್ರವಾಹದ ಅಬ್ಬರಕ್ಕೆ 96 ಹಳ್ಳಿಗಳು ಜಲಾವೃತಗೊಂಡಿದ್ದು, ಸುಮಾರು 1,690 ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ರೈತರ ಜೀವನಾಧಾರವಾಗಿದ್ದ 48,199 ಜಾನುವಾರುಗಳು ಕೂಡ ಪ್ರವಾಹದ ಪರಿಣಾಮ ಸಂಕಷ್ಟಕ್ಕೆ ಸಿಲುಕಿವೆ.
ಬ್ರಹ್ಮಪುತ್ರ ಸೇರಿದಂತೆ ಹಲವು ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶಿವಸಾಗರ್ ಜಿಲ್ಲೆಯ ನಾಂಗ್ಲಾಮುರಘಾಟ್ ಪ್ರದೇಶದಲ್ಲಿ ಡಿಸಾಂಗ್ ನದಿಯ ನೀರಿನ ಮಟ್ಟ ಆತಂಕಕಾರಿ ಮಟ್ಟ ತಲುಪಿದೆ. ಮಳೆ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಸಂತ್ರಸ್ತರಿಗೆ ನೆರವು ನೀಡಲು ಸರ್ಕಾರ ಸಜ್ಜು
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಸಂತ್ರಸ್ತರಿಗೆ ತಕ್ಷಣ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರ ಎಲ್ಲ ಅಗತ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.