ಲಗೇಜ್ ಬ್ಯಾಗ್ನಲ್ಲಿ ಎಂಡಿಎಂಎ ಕಳ್ಳಸಾಗಣೆ! ಬೆಂಗಳೂರಿನಲ್ಲಿ ಮೂವರು ನೈಜೀರಿಯಾ ಪ್ರಜೆಗಳ ಬಂಧನ; ₹21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು: ರಾಜ್ಯವನ್ನು ಮಾದಕದ್ರವ್ಯ ಮುಕ್ತವಾಗಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಡ್ರಗ್ಸ್ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಲಗೇಜ್ ಬ್ಯಾಗ್ಗಳಲ್ಲಿ ಅಡಗಿಸಿ ಎಂಡಿಎಂಎ ಕ್ರಿಸ್ಟಲ್ ಕಳ್ಳಸಾಗಣೆ ಮಾಡುತ್ತಿದ್ದ ಮೂವರು ನೈಜೀರಿಯಾ ಪ್ರಜೆಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಸುಮಾರು ₹21 ಕೋಟಿ ಮೌಲ್ಯದ 10 ಕೆಜಿ 270 ಗ್ರಾಂ ಎಂಡಿಎಂಎ ಕ್ರಿಸ್ಟಲ್, ನಾಲ್ಕು ಮೊಬೈಲ್ ಫೋನ್ಗಳು, ಎರಡು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಡಿಗೆ ಮನೆಯಿಂದಲೇ ಡ್ರಗ್ಸ್ ಜಾಲ
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲಕೊನೆಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದರು. ಅಲ್ಲಿಯೇ ಮಾದಕ ವಸ್ತುಗಳನ್ನು ಸಂಗ್ರಹಿಸಿ, ಸಣ್ಣ ಪ್ರಮಾಣದಲ್ಲಿ ಪ್ಯಾಕ್ ಮಾಡಿ ನಗರದಲ್ಲಿ ವಿತರಣೆ ಮಾಡುತ್ತಿದ್ದರು ಎನ್ನಲಾಗಿದೆ.
ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳೇ ಗುರಿ
ಆರೋಪಿಗಳು ವೈದ್ಯಕೀಯ ಹಾಗೂ ಪ್ರವಾಸಿ ವೀಸಾ ಮೂಲಕ ಭಾರತಕ್ಕೆ ಆಗಮಿಸಿದ್ದು, ನಂತರ ನೈಜೀರಿಯಾ ಮೂಲದ ಇತರ ಡ್ರಗ್ ಪೆಡ್ಲರ್ಗಳ ಸಂಪರ್ಕದ ಮೂಲಕ ಎಂಡಿಎಂಎ ಕ್ರಿಸ್ಟಲ್ಗಳನ್ನು ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದರು. ನಗರದಲ್ಲಿನ ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳನ್ನು ಪ್ರಮುಖ ಗ್ರಾಹಕರನ್ನಾಗಿ ಮಾಡಿಕೊಂಡು ಡ್ರಗ್ಸ್ ಮಾರಾಟ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ವೀಸಾ ಅವಧಿ ಮುಗಿದರೂ ಅಕ್ರಮ ವಾಸ
ಮತ್ತೊಂದು ಆತಂಕಕಾರಿ ಅಂಶವೆಂದರೆ, ಬಂಧಿತ ಮೂವರ ವೀಸಾ ಅವಧಿ ಈಗಾಗಲೇ ಮುಕ್ತಾಯವಾಗಿದ್ದರೂ ಅವರು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದು, ಮಾದಕದ್ರವ್ಯ ಜಾಲವನ್ನು ಮುಂದುವರಿಸಿದ್ದರು ಎಂಬ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆ.
ಪ್ರಸ್ತುತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದ ಹಿಂದೆ ಇನ್ನೂ ಯಾರು ಇದ್ದಾರೆ, ಡ್ರಗ್ಸ್ ಪೂರೈಕೆ ಜಾಲ ಎಷ್ಟು ವಿಸ್ತಾರವಾಗಿದೆ ಎಂಬ ಕುರಿತು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Tags:#Bengaluru #BengaluruNews #CCB #CCBPolice #DrugBust #Drugs #MDMA #MDMACrystal #DrugPeddling #NigerianNationals #CrimeNews #KarnatakaPolice #BengaluruCrime #Students #ITEmployees #BreakingNews #Karnataka #KannadaNews #KarunaaduTimes