ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪ ತುಮಕೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದ ಭೀಕರ ಘಟನೆಯೊಂದು ಆತಂಕಕ್ಕೆ ಕಾರಣವಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಹಾಗೂ ಯುವತಿಯ ನಡುವೆ ಉಂಟಾದ ಗಲಾಟೆ ಕೊನೆಗೆ ಒಬ್ಬನ ಸಾವಿನಲ್ಲಿ ಅಂತ್ಯಗೊಂಡಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನೊಳಗೆ ನಡೆದ ವಾಗ್ವಾದದ ವೇಳೆ ನಾಗೇಂದ್ರ ಯುವತಿಯ ತಲೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಯುವತಿಯನ್ನು ತಕ್ಷಣವೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇದಾದ ಬಳಿಕ ನಾಗೇಂದ್ರ ಕಾರಿನೊಳಗೇ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನಗೊಂಡು ಮೃತಪಟ್ಟಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಆತ ದಹನಕ್ಕೆ ಕಾರಣವಾಗುವ ವಸ್ತುವನ್ನು ಮುಂಚಿತವಾಗಿಯೇ ಕಾರಿನಲ್ಲಿ ತಂದಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆಯ ನಿಖರ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿಯಂತೆ, ಇಬ್ಬರೂ ಬೆಂಗಳೂರಿನಿಂದ ಅಂಕೋಲದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ. ಮೃತ ಮತ್ತು ಗಾಯಾಳುವಿನ ನಡುವಿನ ಸಂಬಂಧ ಸೇರಿದಂತೆ ಘಟನೆಗೆ ಕಾರಣವಾದ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.