ಕೆ.ಆರ್.ಪೇಟೆ: ಬೆಂಗಳೂರು ನಿರ್ಮಾತೃ ಹಾಗೂ ಜನಪರ ಆಡಳಿತದ ಪ್ರತೀಕವಾಗಿರುವ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಕೆ.ಆರ್.ಪೇಟೆ ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ಡಿಪೋದಲ್ಲಿ ಶನಿವಾರ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಬಸ್ ಡಿಪೋ ವ್ಯವಸ್ಥಾಪಕಿ ಉಮಾ ಮಹೇಶ್ವರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ದೂರದೃಷ್ಟಿಯ ಆಡಳಿತಗಾರರಾಗಿದ್ದು, ರೈತರು, ಶ್ರಮಿಕರು ಹಾಗೂ ಸಾಮಾನ್ಯ ಜನರ ಹಿತವನ್ನು ಸದಾ ಆದ್ಯತೆಯಾಗಿ ಪರಿಗಣಿಸಿದ್ದರು ಎಂದು ಹೇಳಿದರು. ಕೆರೆ-ಕಟ್ಟೆಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಅಭಿವೃದ್ಧಿ ಹಾಗೂ ವ್ಯಾಪಾರ-ವಹಿವಾಟಿಗೆ ಅನುಕೂಲವಾಗುವಂತೆ ಪೇಟೆಗಳ ನಿರ್ಮಾಣದ ಮೂಲಕ ಅವರು ಜನಪರ ಆಡಳಿತಕ್ಕೆ ಹೊಸ ದಿಕ್ಕು ತೋರಿದ್ದರು ಎಂದು ಸ್ಮರಿಸಿದರು.
ಕೆಂಪೇಗೌಡರ ಆಡಳಿತದ ಮೌಲ್ಯಗಳು ಇಂದಿನ ಜನಪ್ರತಿನಿಧಿಗಳಿಗೆ ಮಾರ್ಗದರ್ಶಿಯಾಗಬೇಕು. ಅವರ ಪ್ರಾಮಾಣಿಕತೆ, ಅಭಿವೃದ್ಧಿ ಪರ ಚಿಂತನೆ ಮತ್ತು ಜನಕಲ್ಯಾಣದ ದೃಷ್ಟಿಕೋನವನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಉಮಾ ಮಹೇಶ್ವರಿ ಅಭಿಪ್ರಾಯಪಟ್ಟರು.
ಜಯಂತಿ ಅಂಗವಾಗಿ ಘಟಕದ ಸಿಬ್ಬಂದಿಗಳಾದ ಕೃಷ್ಣೇಗೌಡ ಹಾಗೂ ಹರ್ಷ ಶಶಿಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅರುಣ್, ಕಾಂತರಾಜ್, ದೀಪಕ್, ಪುಟ್ಟಲಿಂಗು, ಮೇಲ್ವಿಚಾರಕರಾದ ಸತೀಶ್ ಕುಮಾರ್, ರಮೇಶ್ ಸೇರಿದಂತೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Tags:#KempegowdaJayanti #NadaprabhuKempegowda #KRPete #Mandya #KSRTC #BusDepot #UmaMaheshwari #Kempegowda #Karnataka #PublicAdministration #KannadaNews #MandyaNews #KarunaaduTimes #JayantiCelebration #KSRTCNews