ಚನ್ನಪಟ್ಟಣ: ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಸ್ನೇಹಿತರ ನಡುವಿನ ವಾಗ್ವಾದ ಕೊನೆಗೆ ಯುವಕನ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಘಟನೆಯು ನಗರದ ಬೆಂಗಳೂರು–ಮೈಸೂರು ಹೆದ್ದಾರಿಯ ಷೇರು ಹೋಟೆಲ್ ಮತ್ತು ಸಾತನೂರು ವೃತ್ತದ ನಡುವಿನ ಷಾಹಿ ತಾಜ್ ಹೋಟೆಲ್ ಸಮೀಪ ಶುಕ್ರವಾರ ತಡರಾತ್ರಿ ನಡೆದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧು, ಅಭಿ, ಭರತ್ ಸೇರಿದಂತೆ ಕೆಲ ಸ್ನೇಹಿತರು ಬಾರ್ನಲ್ಲಿ ಮದ್ಯಪಾನ ಮಾಡಿದ್ದರು. ಇದೇ ವೇಳೆ ಮಾತಿನ ಚಕಮಕಿ ಉಂಟಾಗಿ ಪರಸ್ಪರ ವಾಗ್ವಾದ ನಡೆದಿತ್ತು. ಬಳಿಕ ಎಲ್ಲರೂ ಅಲ್ಲಿಂದ ಹೊರಟು ಷಾಹಿ ತಾಜ್ ಹೋಟೆಲ್ ಸಮೀಪ ಬಂದರೂ ಪರಿಸ್ಥಿತಿ ಶಾಂತವಾಗಿರಲಿಲ್ಲ.
ಸ್ವಲ್ಪ ಸಮಯದ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಜಗಳ ತೀವ್ರಗೊಂಡಿದ್ದು, ಈ ವೇಳೆ ಭರತ್ ತಮ್ಮ ಸ್ನೇಹಿತರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಧು ಮತ್ತು ಅಭಿ ಸೇರಿ ಭರತ್ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಗಲಾಟೆ ಬಿಡಿಸಲು ಮುಂದಾದ ಮತ್ತೊಬ್ಬ ಸ್ನೇಹಿತನಿಗೂ ಕೈಗೆ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡ ಭರತ್ ವಿಪರೀತ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ನಿಖರ ಕಾರಣ ಹಾಗೂ ಹಿನ್ನೆಲೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಬಳಿಕ ಹೆದ್ದಾರಿ ಪಕ್ಕದಲ್ಲಿರುವ ಬಾರ್ ಮತ್ತು ಹೋಟೆಲ್ಗಳ ಕಾರ್ಯಾಚರಣೆ ಸಮಯದ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ನಿಗದಿತ ಅವಧಿ ಮೀರಿ ಕಾರ್ಯನಿರ್ವಹಿಸುವ ಮದ್ಯದಂಗಡಿ ಹಾಗೂ ಹೋಟೆಲ್ಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Tags:#Channapatna #Ramanagara #BengaluruMysuruHighway #MurderCase #KnifeAttack #CrimeNews #KarnatakaCrime #ChannapatnaPolice #BreakingNews #KarnatakaNews #LawAndOrder #PublicSafety #KarunaaduTimes #RamanagaraNews #PoliceInvestigation