ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವಿದ್ಯುತ್ ಪ್ರಸರಣ ವ್ಯವಸ್ಥೆಯ ಮೇಲ್ವಿಚಾರಣೆಯಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದು, ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನದ ಮೂಲಕ ರಾಜ್ಯದಾದ್ಯಂತ 11 ಸಾವಿರಕ್ಕೂ ಹೆಚ್ಚು ಹೈ ವೋಲ್ಟೇಜ್ ಹಾಗೂ ಎಕ್ಸ್ಟ್ರೀಮ್ ಹೈ ವೋಲ್ಟೇಜ್ (EHV) ವಿದ್ಯುತ್ ಟವರ್ಗಳ ಪರಿಶೀಲನೆ ನಡೆಸಿದೆ.
ಈ ಪರಿಶೀಲನೆ ವೇಳೆ ಸುಮಾರು 1.50 ಲಕ್ಷಕ್ಕೂ ಅಧಿಕ ತಾಂತ್ರಿಕ ದೋಷಗಳನ್ನು ಗುರುತಿಸಿ ಅವುಗಳನ್ನು ಹಂತ ಹಂತವಾಗಿ ಸರಿಪಡಿಸಲಾಗಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯದ ಪ್ರಮಾಣವು ಶೇ.85ರಷ್ಟು ಕಡಿಮೆಯಾಗಿದೆ ಎಂದು ಕೆಪಿಟಿಸಿಎಲ್ ತಿಳಿಸಿದೆ.
ಡ್ರೋನ್ಗಳಲ್ಲಿ ಅಳವಡಿಸಲಾದ ಹೈ ರೆಸಲ್ಯೂಶನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ ವ್ಯವಸ್ಥೆ ಹಾಗೂ ಲಿಡಾರ್ ಸೆನ್ಸಾರ್ಗಳ ನೆರವಿನಿಂದ ದಟ್ಟ ಅರಣ್ಯ, ಗುಡ್ಡಗಾಡು ಹಾಗೂ ನಗರ ಪ್ರದೇಶಗಳಲ್ಲಿ ಇರುವ ವಿದ್ಯುತ್ ಟವರ್ಗಳು, ವಾಹಕಗಳು ಮತ್ತು ಇನ್ಸುಲೇಟರ್ಗಳನ್ನು ನಿಖರವಾಗಿ ಪರಿಶೀಲಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ಸಡಿಲ ಸಂಪರ್ಕ, ಅಧಿಕ ಉಷ್ಣತೆ (ಹಾಟ್ಸ್ಪಾಟ್) ಮತ್ತು ಇತರೆ ತಾಂತ್ರಿಕ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗಿದ
ಡ್ರೋನ್ಗಳ ಮೂಲಕ ಸಂಗ್ರಹವಾಗುತ್ತಿರುವ ತಾಂತ್ರಿಕ ಮಾಹಿತಿಯನ್ನು ಎಂಜಿನಿಯರ್ಗಳು ವಿಶ್ಲೇಷಿಸಿ ನಿರ್ವಹಣಾ ಕಾರ್ಯಗಳನ್ನು ವೇಗವಾಗಿ ಕೈಗೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಈ ವ್ಯವಸ್ಥೆಯನ್ನು ಡಿಜಿಟಲ್ ಟ್ವಿನ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಯೋಜನೆಯೂ ಇದ್ದು, ನಿಯಂತ್ರಣ ಕೊಠಡಿಯಿಂದಲೇ ಸಂಪೂರ್ಣ ವಿದ್ಯುತ್ ಜಾಲವನ್ನು ಮೇಲ್ವಿಚಾರಣೆ ಮಾಡಲು ಅವಕಾಶ ಸಿಗಲಿದೆ.
ಒಟ್ಟಾರೆ, ಡಿಜಿಟಲ್ ತಂತ್ರಜ್ಞಾನ ಮತ್ತು ಡ್ರೋನ್ ಬಳಕೆಯ ಮೂಲಕ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತ, ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹವಾಗಿಸುವ ದಿಸೆಯಲ್ಲಿ KPTCL ಮಹತ್ವದ ಹೆಜ್ಜೆ ಇಟ್ಟಿದೆ.
Tags:#KPTCL #Karnataka #Bengaluru #DroneTechnology #DigitalTechnology #PowerTransmission #Electricity #SmartGrid #ThermalImaging #LiDAR #Infrastructure #Technology #DigitalTransformation #KarnatakaNews #BreakingNews #KarunaaduTimes