ಬೆಂಗಳೂರು: ಮಂಡ್ಯ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿ ಪ್ರದೇಶದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಪ್ರಾಣಹಾನಿ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಪ್ರವಾಸಿಗರ ಸುರಕ್ಷತೆಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಗೃಹ ಸಚಿವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಮುತ್ತತ್ತಿ ಗ್ರಾಮದಲ್ಲಿ ಪೊಲೀಸ್ ಉಪಠಾಣೆ ಸ್ಥಾಪನೆ ಸೇರಿದಂತೆ ನದಿ ತೀರದಲ್ಲಿ ಸಮಗ್ರ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ, ಕಾವೇರಿ ನದಿಯ ಅಪಾಯಕಾರಿ ಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸುವುದು, ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು, ನದಿಯ ಅಪಾಯಕಾರಿ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ತಡೆಯಲು ಬ್ಯಾರಿಕೇಡ್ ಹಾಗೂ ಮುಳ್ಳಿನ ತಂತಿ ಬೇಲಿ ನಿರ್ಮಿಸುವುದು ಸೇರಿದಂತೆ ಹಲವು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಮುತ್ತತ್ತಿಯ ಕಾವೇರಿ ನದಿಯಲ್ಲಿ ನೀರಿನ ಸುಳಿಗಳಿಗೆ ಸಿಲುಕಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿರುವ ಅವರು, ಕಳೆದ ಐದು ತಿಂಗಳಲ್ಲಿ 11ಕ್ಕೂ ಹೆಚ್ಚು ಮಂದಿ ಹಾಗೂ ಕಳೆದ ಐದು ವರ್ಷಗಳಲ್ಲಿ 36ಕ್ಕೂ ಅಧಿಕ ಪ್ರವಾಸಿಗರು ಜೀವ ಕಳೆದುಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ದುರ್ಘಟನೆಗಳನ್ನು ತಡೆಗಟ್ಟಲು ಪರಿಣಾಮಕಾರಿ ಸುರಕ್ಷತಾ ವ್ಯವಸ್ಥೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಮುತ್ತತ್ತಿ ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಕ್ತರು ಹಾಗೂ ಪ್ರವಾಸಿಗರು ಕಾವೇರಿ ನದಿಗೆ ಇಳಿಯುವ ವೇಳೆ ಸೂಕ್ತ ಭದ್ರತಾ ವ್ಯವಸ್ಥೆಯ ಕೊರತೆಯಿಂದ ಅಪಾಯಕ್ಕೆ ಸಿಲುಕುವ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಪತ್ರದಲ್ಲಿ ಒತ್ತಿಹೇಳಿದ್ದಾರೆ.
Tags:#Muttatti #CauveryRiver #Mandya #HDKumaraswamy #Karnataka #TouristSafety #RiverSafety #PoliceOutpost #PriyankKharge #KarnatakaNews #MandyaNews #TravelSafety #KarunaaduTimes