ರಾಮನಗರ: ಬಿಡದಿ ಟೌನ್ಶಿಪ್ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟಕ್ಕೆ ಮಹತ್ವದ ಬೆಂಬಲ ವ್ಯಕ್ತವಾಗಿದೆ. ನಿವೃತ್ತ ಲೋಕಾಯುಕ್ತ ಹಾಗೂ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರೈತರ ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದ್ದು, ಜುಲೈ 9ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಸ್ವತಃ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರು, ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಸಂತೋಷ್ ಹೆಗ್ಡೆ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ, ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟದ ಕುರಿತು ವಿವರವಾಗಿ ಮಾಹಿತಿ ನೀಡಿದರು.
ರೈತರ ಮಾತು ಆಲಿಸಿದ ಸಂತೋಷ್ ಹೆಗ್ಡೆ, ಈ ಹೋರಾಟದ ಬೆಳವಣಿಗೆಗಳನ್ನು ತಾವು ಮಾಧ್ಯಮಗಳ ಮೂಲಕ ಗಮನಿಸುತ್ತಿರುವುದಾಗಿ ತಿಳಿಸಿದರು. ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವುದು ಮಾನವೀಯ ಮೌಲ್ಯಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಲದೆ, ಈ ವಿಚಾರವನ್ನು ರಾಜಕೀಯ ಪ್ರತಿಷ್ಠೆಯ ವಿಷಯವನ್ನಾಗಿ ಮಾಡದೆ, ರೈತರ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಜುಲೈ 9ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರೊಂದಿಗೆ ಐಕ್ಯತೆ ವ್ಯಕ್ತಪಡಿಸುವುದಾಗಿ ಘೋಷಿಸಿದ ಅವರು, ವಿವಿಧ ರೈತ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳು ಸಹ ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಈ ಭೇಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕುಮಾರಸ್ವಾಮಿ, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ನದೀಮ್ ಪಾಷಾ, ರಾಜ್ಯ ಸಲಹೆಗಾರ ಪ್ರಶಾಂತ್ ಹೊಸದುರ್ಗ, ವೆಂಕಟೇಶ್ ಕಾಣಿಕ್ರಾಜ್, ಬೈರಮಂಗಲದ ರೈತ ಮುಖಂಡರಾದ ನಾಗರಾಜ್, ಆನಂದ್, ಕೃಷ್ಣಪ್ಪ ಸೇರಿದಂತೆ ಹಲವು ರೈತರು ಹಾಗೂ ಮಹಿಳಾ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.
Tags:#BidadiTownship #Byramangala #Kanchugaranahalli #FarmersProtest #LandAcquisition #SantoshHegde #Ramanagara #KarnatakaFarmers #FarmerRights #BhooSwadheena #KarnatakaNews #BreakingNews #KarunaaduTimes