ಮಂಗಳೂರು: ಪ್ರಾಮಾಣಿಕತೆ, ನೇರ ನುಡಿ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿ ಅವರ ಸ್ಮರಣಾರ್ಥ ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣೆ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕಾಜವ, ಬಾಳೇಪುಣಿಯವರು ಜೀವನಪೂರ್ತಿ ಸತ್ಯ, ನ್ಯಾಯ ಮತ್ತು ಸಾಮಾಜಿಕ ಮೌಲ್ಯಗಳಿಗೆ ಬದ್ಧರಾಗಿ ಕೆಲಸ ಮಾಡಿದ ಪತ್ರಕರ್ತರಾಗಿದ್ದರು. ಅವರ ಹೆಸರಿನಲ್ಲಿ ಆರಂಭಿಸಿರುವ ದತ್ತಿನಿಧಿ ಯೋಜನೆ ಸಮಾಜಕ್ಕೆ ಮಾದರಿಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಟ್ಟು 1.50 ಲಕ್ಷ ರೂಪಾಯಿ ಮೊತ್ತದ ದತ್ತಿನಿಧಿಯನ್ನು ವಿವಿಧ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಂಬತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಉದ್ಯಮಿ ರಾಧಾಕೃಷ್ಣ ರೈ ಉಮಿಯ ಮಾತನಾಡಿ, ಬಾಳೇಪುಣಿಯವರ ಸೇವೆ ಮತ್ತು ವ್ಯಕ್ತಿತ್ವ ಪತ್ರಿಕೋದ್ಯಮಕ್ಕೆ ಆದರ್ಶವಾಗಿತ್ತು. ಸಮಾಜದ ಅಂಚಿನಲ್ಲಿದ್ದ ಸಾಧಕರನ್ನು ಬೆಳಕಿಗೆ ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಅವರ ಹೆಸರಿನಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಮಾತನಾಡಿ, ಜಿಲ್ಲೆಯ ಹಲವು ಸಾಮಾಜಿಕ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಬೆಳಕಿಗೆ ತಂದು ಬದಲಾವಣೆಗೆ ಕಾರಣರಾದ ಪತ್ರಕರ್ತರಲ್ಲಿ ಬಾಳೇಪುಣಿಯವರು ಪ್ರಮುಖರು ಎಂದು ಸ್ಮರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರು ಬಾಳೇಪುಣಿಯವರೊಂದಿಗೆ ಹೊಂದಿದ್ದ ಒಡನಾಟವನ್ನು ನೆನಪಿಸಿಕೊಂಡು, ಅವರ ವೃತ್ತಿಪರ ಬದ್ಧತೆ ಮತ್ತು ಮೌಲ್ಯಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಮಾತನಾಡಿ, ಶಿಕ್ಷಣದ ಮೂಲಕ ಸಮಾಜ ನಿರ್ಮಾಣವೇ ಬಾಳೇಪುಣಿಯವರ ಆಶಯವಾಗಿತ್ತು. ಅದೇ ಉದ್ದೇಶದೊಂದಿಗೆ ಎಜುಕಾರುಣ್ಯ ಟ್ರಸ್ಟ್ ಶಿಕ್ಷಣ ಮತ್ತು ಸಮಾಜಸೇವೆಯ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.
Tags:#Mangaluru #GuruvappaNTBalepuni #Education #Scholarship #EndowmentFund #Students #DakshinaKannada #PressClub #Journalism #EducationalSupport #KarunaaduTimes #KarnatakaNews #EducationNews #SocialService #CharitableTrust