ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಸವನಪುರ ಗ್ರಾಮದಲ್ಲಿ ಮಾನವೀಯತೆಯನ್ನೇ ಪ್ರಶ್ನಿಸುವಂತ ಘಟನೆ ನಡೆದಿದೆ. ಮನೆಯಲ್ಲೊಬ್ಬರೇ ಇದ್ದ 80 ವರ್ಷದ ವೃದ್ಧೆಯ ಮೇಲೆ ದುಷ್ಕರ್ಮಿ ಕ್ರೂರವಾಗಿ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ದೋಚಲು ಕಿವಿಯನ್ನೇ ಕತ್ತರಿಸಿದ ಪರಿಣಾಮ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಬಸವನಪುರ ಗ್ರಾಮದ ಸುಬ್ಬಮ್ಮ (80) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಗೆ ತೀವ್ರವಾಗಿ ಹೊಡೆದ ಬಳಿಕ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಸಿದುಕೊಳ್ಳುವ ಉದ್ದೇಶದಿಂದ ಕಿವಿಗಳನ್ನು ಕತ್ತರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕೆಲಸದ ನಿಮಿತ್ತ ಹೊರಗಿದ್ದ ಸುಬ್ಬಮ್ಮ ಅವರ ಮಗಳು ಮನೆಗೆ ವಾಪಸ್ಸಾದಾಗ, ತಾಯಿ ರಕ್ತದ ಮಡುವಿನಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಸುಬ್ಬಮ್ಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಂಚೇನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಯ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಗ್ರಾಮಸ್ಥರು ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುವ ಕಾರ್ಯವೂ ಮುಂದುವರಿದಿದೆ. ಕೇವಲ ಚಿನ್ನದ ಓಲೆಗಾಗಿ ನಡೆದಿರುವ ಈ ಅಮಾನವೀಯ ಕೃತ್ಯ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
TAgs: Chikkaballapur #Gauribidanur #Basavanapura #CrimeNews #KarnatakaCrime #MurderCase #GoldTheft #SeniorCitizen #ChikkaballapurNews #PoliceInvestigation #ManchenahalliPolice #BreakingNews #KarnatakaNews #ElderlyWoman #CrimeInKarnataka #GoldEarrings #VillageCrime #KannadaNews #LatestNews #GauribidanurNews