ಮುಂಬೈ/ಥಾಣೆ: ಮದುವೆಯಾಗಿ ಕೇವಲ 48 ದಿನಗಳಾಗಿದ್ದ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತರನ್ನು ವಿಶಾಖಾ ತಿಲ್ಕರ್ (26) ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್ 30ರಂದು ವೈದ್ಯ ವೃತ್ತಿಯಲ್ಲಿದ್ದ ನಿತಿನ್ ತಿಲ್ಕರ್ ಅವರೊಂದಿಗೆ ಅವರ ವಿವಾಹ ನಡೆದಿತ್ತು.
ಮೃತೆಯ ಕುಟುಂಬದ ಆರೋಪದ ಪ್ರಕಾರ, ಮದುವೆಯ ಬಳಿಕ ಹೆಚ್ಚುವರಿ ಚಿನ್ನ ಹಾಗೂ ಹಣ ತರಬೇಕೆಂದು ಒತ್ತಡ ಹೇರಲಾಗುತ್ತಿತ್ತು. ಇದೇ ವಿಚಾರವಾಗಿ ಪತಿ ಮತ್ತು ಕುಟುಂಬದ ಸದಸ್ಯರು ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇದಲ್ಲದೆ, ಪತ್ನಿಯ ಚಟುವಟಿಕೆಗಳ ಬಗ್ಗೆ ಅನುಮಾನ ಹೊಂದಿದ್ದ ಪತಿ, ಮನೆಯೊಳಗೆ ಮತ್ತು ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾವಹಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಸಣ್ಣ-ಪುಟ್ಟ ವಿಚಾರಗಳಿಗೂ ಜಗಳಗಳು ನಡೆಯುತ್ತಿದ್ದು, ಕೆಲ ಸಂದರ್ಭಗಳಲ್ಲಿ ದೈಹಿಕ ಹಲ್ಲೆಯೂ ನಡೆದಿರುವುದಾಗಿ ಕುಟುಂಬದವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಗೆ ಕೆಲ ದಿನಗಳ ಮುನ್ನವೇ ಯುವತಿ ತನ್ನ ತಾಯಿಗೆ ಕರೆ ಮಾಡಿ ತಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡ ಮತ್ತು ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಮಗಳನ್ನು ಮರಳಿ ಮನೆಗೆ ಕರೆತರುವ ಬಗ್ಗೆ ಪೋಷಕರು ಚಿಂತನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ.
ಪ್ರಕರಣದ ಕುರಿತು ಅಂಬರನಾಥ್ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಮೃತೆಯ ಪತಿ ನಿತಿನ್ ತಿಲ್ಕರ್, ಅತ್ತೆ ಛಾಯಾ ತಿಲ್ಕರ್ ಹಾಗೂ ಮೈದುನ ನಿನಾದ್ ತಿಲ್ಕರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರೋಪಿತರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.