ಕೈಮುಗಿದು ಕೇಳುತ್ತೇನೆ… ಪ್ರತಿಭಟನೆ ಕೈಬಿಡಿ!
ಕಬ್ಬು ಬೆಳೆಗಾರರ ಬಳಿ ಕೈಮುಗಿದು ಮನವಿ ಮಾಡಿದ ಡಿ.ಕೆ. ಶಿವಕುಮಾರ್, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹತ್ವದ ಭರವಸೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದಸರಾ ಹಬ್ಬದ ಬಳಿಕ ಮುಂದಿನ ವಾರದಲ್ಲೇ ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.
ರೈತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರವೊಂದರಿಂದಲೇ ಸಾಧ್ಯವಿಲ್ಲ. ಕೇಂದ್ರ ಸರ್ಕಾರ, ಬ್ಯಾಂಕುಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೂಡ ಈ ವಿಚಾರದಲ್ಲಿ ಕೈಜೋಡಿಸಬೇಕು. ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.
ಇದೇ ವೇಳೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ ಡಿ.ಕೆ. ಶಿವಕುಮಾರ್, ರೈತರು ಕರೆದ ಸ್ಥಳಕ್ಕೆ ಬರಲು ತಾನು ಸಿದ್ಧನಿದ್ದೇನೆ. ರೈತರ ಜೊತೆಗೇ ಬೀದಿಯಲ್ಲಿ ಮಲಗಲೂ ಸಿದ್ಧ. ಅವರು ನೀಡುವ ಚಾಪೆಯ ಮೇಲೆ ಮಲಗಿ, ಅವರು ಕೊಡುವ ರೊಟ್ಟಿಯನ್ನೇ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದಾರೆ.
ರೈತರೇ ನಮ್ಮನ್ನು ಸಾಕಿ ಸಲಹುವವರು. ಅವರ ಬದುಕಿಗೆ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ರೈತರಿಗೆ ಸಂಬಳವಿಲ್ಲ, ಪಿಂಚಣಿಯಿಲ್ಲ, ಬಡ್ತಿಯಿಲ್ಲ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಬೆಂಗಳೂರಿನಿಂದ ಕಿತ್ತೂರಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಇನ್ನು, ರೈತ ಮುಖಂಡ ಚೂನಪ್ಪ ಪೂಜಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಗಳ ಮಾಹಿತಿ ಪಡೆದಿರುವುದಾಗಿ ತಿಳಿಸಿದ ಅವರು, ಸಹಕಾರ, ಕೃಷಿ ಹಾಗೂ ಸಕ್ಕರೆ ಸಚಿವರನ್ನು ದೆಹಲಿಗೆ ಕಳುಹಿಸಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿರುವುದಾಗಿಯೂ ಹೇಳಿದ್ದಾರೆ.
ಇನ್ನೊಂದೆಡೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೂಡ ಉತ್ಪಾದನಾ ವೆಚ್ಚ, ವಿದ್ಯುತ್ ಖರೀದಿ ಹಾಗೂ ನಷ್ಟದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ಕಾರ್ಖಾನೆಗಳನ್ನು ನಡೆಸುವುದೇ ಕಷ್ಟಕರವಾಗಿದೆ ಎಂಬ ಪರಿಸ್ಥಿತಿ ಇದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ, ರೈತರು ಎದುರು ನೋಡುತ್ತಿರುವುದು ಕೇವಲ ಭರವಸೆಯನ್ನಲ್ಲ… ತಮ್ಮ ಬೆವರಿಗೆ ತಕ್ಕ ಬೆಲೆ ಮತ್ತು ಬದುಕಿಗೆ ಭದ್ರತೆ ನೀಡುವ ನಿರ್ಧಾರವನ್ನು.
ಸರ್ಕಾರದ ಮುಂದಿನ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಪರಿಹಾರ ಸಿಗುತ್ತದೆಯೇ? ಕಬ್ಬು ಬೆಳೆಗಾರರ ಹೋರಾಟಕ್ಕೆ ಅಂತ್ಯ ಸಿಗುತ್ತದೆಯೇ? ಕಾದು ನೋಡಬೇಕಿದೆ.
ಇಂತಹ ಮತ್ತಷ್ಟು ಪ್ರಮುಖ ಸುದ್ದಿಗಳಿಗಾಗಿ ಕರುನಾಡು ಟೈಮ್ಸ್ ವೆಬ್ಸೈಟ್ಗೆ ಭೇಟಿ ನೀಡಿ.
www.karunaadutimes.com
ವರದಿ: ನವೀನ್ ಕುಮಾರ್.