ಚಿತ್ರದುರ್ಗ: ಯುವಕನೊಬ್ಬನ ಇಚ್ಛೆಗೆ ವಿರುದ್ಧವಾಗಿ ಆತನ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪ ಹಾಗೂ ದೈಹಿಕ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಂಗಳಮುಖಿಯರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನುಷ್ಕಾ ಮತ್ತು ನಳಿನಾ ಬಂಧಿತ ಆರೋಪಿಗಳಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೂವು ವ್ಯಾಪಾರದ ವೇಳೆ ಪರಿಚಯ
ಚಿತ್ರದುರ್ಗದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ 25 ವರ್ಷದ ಯುವಕನಿಗೆ ಹೂವು ನೀಡುವ ಸಂದರ್ಭ ಅನುಷ್ಕಾ ಮತ್ತು ನಳಿನಾ ಪರಿಚಯವಾಗಿದ್ದರು ಎನ್ನಲಾಗಿದೆ. ಬಳಿಕ ಯುವಕನೊಂದಿಗಿನ ಪರಿಚಯವನ್ನು ದುರುಪಯೋಗಪಡಿಸಿಕೊಂಡು, ಸೆಪ್ಟೆಂಬರ್ 1ರಂದು ಆತನ ಇಚ್ಛೆಗೆ ವಿರುದ್ಧವಾಗಿ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪ ಕೇಳಿಬಂದಿದೆ.
ಇಷ್ಟಕ್ಕೇ ನಿಲ್ಲದೆ, ಯುವಕನ ತೊಡೆಗಳಿಗೆ ಬಿಸಿನೀರು ಮತ್ತು ಕೆಂಡದಿಂದ ಸುಟ್ಟು ಹಿಂಸೆ ನೀಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸದ್ಯ ಯುವಕ ತನ್ನ ಸ್ವಗ್ರಾಮದಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.
ತಂದೆಯಿಂದ ದೂರು; ತನಿಖೆ ಚುರುಕು
ಈ ಘಟನೆಗೆ ಸಂಬಂಧಿಸಿದಂತೆ ಯುವಕನ ತಂದೆ ಅಕ್ಟೋಬರ್ 9ರಂದು ಪರಶುರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಚಿತ್ರದುರ್ಗ ನಗರ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಸುತ್ತಾಡುತ್ತಿದ್ದ ವೇಳೆ ಆರೋಪಿಗಳಾದ ಅನುಷ್ಕಾ ಮತ್ತು ನಳಿನಾರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಯುವಕನ ಒಪ್ಪಿಗೆಯಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂಬ ಆರೋಪ ಹಾಗೂ ಆತನ ಮೇಲೆ ನಡೆದಿದೆಯೆನ್ನಲಾದ ದೈಹಿಕ ಹಿಂಸೆಯ ಕುರಿತು ಪ್ರಕರಣದಲ್ಲಿ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ಆರೋಪಗಳ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸ್ಥಳೀಯ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ ಭೇಟಿ ನೀಡಿ:
👉 https://www.karunaadutimes.com
Tags:#Chitradurga #ಚಿತ್ರದುರ್ಗ #CrimeNews #KarnatakaNews #KannadaNews #PoliceInvestigation #ChitradurgaPolice #KarunaaduTimes #ಕರ್ನಾಟಕಸುದ್ದಿ #ಅಪರಾಧಸುದ್ದಿ #ನವೀನ್ಕುಮಾರ್