ಲಕ್ನೋ: ಕರ್ತವ್ಯನಿರತ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ಅಂಬುಲೆನ್ಸ್ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತರಲ್ಲಿ ಯೋಧನ ಪುತ್ರ, ಸಹೋದರ, ಸೋದರಳಿಯ ಹಾಗೂ ಅಂಬುಲೆನ್ಸ್ ಚಾಲಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂಡೀಗಢದಿಂದ ದಿಯೋರಿಯಾ ಜಿಲ್ಲೆಯ ಸ್ವಗ್ರಾಮಕ್ಕೆ ಸೇನೆಯ ಸುಬೇದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರವನ್ನು ಅಂಬುಲೆನ್ಸ್ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಭಾನುವಾರ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಪೂರ್ವಾಂಚಲ್ ಎಕ್ಸ್ಪ್ರೆಸ್ವೇ ಸಮೀಪದ ಹಳಿಯಾಪುರ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್ ನಜ್ಜುಗುಜ್ಜು
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಅಂಬುಲೆನ್ಸ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ಅಪಘಾತದಲ್ಲಿ ಯೋಧನ ಪುತ್ರ ಗೌರವ್ ಸಿಂಗ್ (28) ಹಾಗೂ ಅಂಬುಲೆನ್ಸ್ ಚಾಲಕ ಜಸ್ಪಾಲ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯೋಧನ ಸಹೋದರ ರಾಜನ್ ಚೌಧರಿ (35) ಮತ್ತು ಸೋದರಳಿಯ ರಾಮ್ ಸಮುಜ್ ಸಿಂಗ್ (40) ಅವರನ್ನು ಅಯೋಧ್ಯಾ ಜಿಲ್ಲೆಯ ಪಿಥ್ಲಾ-ಕುಮಾರಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಗ್ರಾಮಕ್ಕೆ ತಲುಪುವ ಮುನ್ನವೇ ದುರಂತ
ಮೃತ ಸುಬೇದಾರ್ ಮೇಜರ್ ಸತ್ಯವಾನ್ ಅವರು ದಿಯೋರಿಯಾ ಜಿಲ್ಲೆಯ ರುದ್ರಪುರ ಪ್ರದೇಶದ ಗಲಿಯಾ ದುಧೈಲಾ ಗ್ರಾಮದ ನಿವಾಸಿಯಾಗಿದ್ದರು. ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಘಟನೆಯ ಮಾಹಿತಿ ತಿಳಿದು ಸುಲ್ತಾನ್ಪುರ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಹಾಗೂ ಜಿಲ್ಲಾಧಿಕಾರಿ ಇಂದ್ರಜೀತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ನವೀನ್ ಕುಮಾರ್
Tags:#Sultanpur #UttarPradesh #Lucknow #AmbulanceAccident #RoadAccident #ArmySoldier #SubedarMajorSatyawan #Soldier #IndianArmy #SultanpurAccident #PurvanchalExpressway #AccidentNews #UttarPradeshNews #ArmyNews #ಕರ್ನಾಟಕ #ಅಪಘಾತ #ಸುಲ್ತಾನ್ಪುರ #ಉತ್ತರಪ್ರದೇಶ #ಯೋಧ #ಅಂಬುಲೆನ್ಸ್_ಅಪಘಾತ #ರಸ್ತೆಅಪಘಾತ #ಸುದ್ದಿ