ಮಡಿಕೇರಿ: ಕುಟುಂಬದ ಭವಿಷ್ಯಕ್ಕಾಗಿ ವರ್ಷಗಳ ಕಾಲ ವಿದೇಶದಲ್ಲಿ ದುಡಿದು, ರಜೆಯಲ್ಲಿ ಪತ್ನಿ ಹಾಗೂ ಮಕ್ಕಳನ್ನು ಕಾಣುವ ಕನಸಿನೊಂದಿಗೆ ತಾಯ್ನಾಡಿಗೆ ಮರಳಿದ್ದ ಕೊಡಗಿನ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ.
ಮೃತರನ್ನು ಸುಂಟಿಕೊಪ್ಪದ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ ಬಶೀರ್ ಎಂದು ಗುರುತಿಸಲಾಗಿದೆ.
ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ಕುವೈತ್ಗೆ ತೆರಳಿದ್ದ ಬಶೀರ್, ಅಲ್ಲಿಯೇ ಉದ್ಯೋಗ ಮಾಡಿಕೊಂಡು ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಿದ್ದರು. ತಾವು ದುಡಿದ ಹಣವನ್ನು ಸುಂಟಿಕೊಪ್ಪದಲ್ಲಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ಕಳುಹಿಸುತ್ತಿದ್ದು, ಅದೇ ಆದಾಯದಿಂದ ಕುಟುಂಬದ ಜೀವನ ಸಾಗುತ್ತಿತ್ತು.
ವರ್ಷಗಳ ಬಳಿಕ ರಜೆ ಸಿಕ್ಕ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಕೆಲ ದಿನಗಳಾದರೂ ಸಂತಸದಿಂದ ಕಾಲ ಕಳೆಯಬೇಕು ಎಂಬ ನಿರೀಕ್ಷೆಯೊಂದಿಗೆ ಬಶೀರ್ ಕುವೈತ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದರು.
ಆದರೆ, ತಾಯ್ನಾಡಿನ ನೆಲಕ್ಕೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ವಿಧಿಯ ಕ್ರೂರ ಆಟ ಕುಟುಂಬದ ಸಂತಸವನ್ನು ಕಸಿದುಕೊಂಡಿದೆ. ಶನಿವಾರ ರಾತ್ರಿ ಸುಮಾರು 3 ಗಂಟೆ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಬಶೀರ್ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಹೃದಯಾಘಾತಕ್ಕೊಳಗಾಗಿ ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದು, ಸದ್ಯ ಮೃತದೇಹ ಬೆಂಗಳೂರಿನಲ್ಲಿದೆ.
ಮೃತದೇಹವನ್ನು ಸುಂಟಿಕೊಪ್ಪಕ್ಕೆ ತಂದು ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ಥಳೀಯರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಇಂದು ಮಧ್ಯಾಹ್ನ 3 ಗಂಟೆಯ ನಂತರ 7ನೇ ಹೊಸಕೋಟೆಯ ಮುಸ್ಲಿಂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವ ನಿರೀಕ್ಷೆಯಲ್ಲಿ ವಿದೇಶದಿಂದ ಮರಳಿದ್ದ ಬಶೀರ್, ತಾಯ್ನಾಡಿನ ನೆಲದಲ್ಲೇ ಕೊನೆಯುಸಿರೆಳೆದಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ. 💔
🌐 ಇನ್ನಷ್ಟು ಸ್ಥಳೀಯ ಹಾಗೂ ಕರ್ನಾಟಕದ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.com
📲 Karunaadu Times — ನಿಮ್ಮೂರಿನ ಸುದ್ದಿ, ನಿಮ್ಮ ಕೈಯಲ್ಲಿ.
ವರದಿ: ನpವೀನ್ ಕುಮಾರ್
Tags:#Kodagu #Madikeri #Suntikoppa #KarnatakaNews #BengaluruAirport #KempegowdaAirport #Kuwait #HeartAttack #BreakingNews #LocalNews #KodaguNews #KarunaaduTimes #ಕರ್ನಾಟಕಸುದ್ದಿ #ಕೊಡಗು #ಸುಂಟಿಕೊಪ್ಪ #ಮಡಿಕೇರಿ #ಬೆಂಗಳೂರು