ಬೆಂಗಳೂರು: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಶಾಸಕರ ನಡುವಿನ ಆಂತರಿಕ ಭಿನ್ನಮತ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಬಂದಿದೆ. ಎರಡೂ ಜಿಲ್ಲೆಗಳಲ್ಲಿ ಶಾಸಕರ ನಡುವೆ ಕಾಣಿಸಿಕೊಂಡಿರುವ ಅಸಮಾಧಾನ ಹಾಗೂ ಪರಸ್ಪರ ಆರೋಪ–ಪ್ರತ್ಯಾರೋಪಗಳು ಪಕ್ಷದೊಳಗಿನ ಚರ್ಚೆಗೆ ಕಾರಣವಾಗಿದ್ದು, ಈ ಬೆಳವಣಿಗೆ ಕಾಂಗ್ರೆಸ್ ನಾಯಕತ್ವಕ್ಕೂ ಸವಾಲಾಗಿ ಪರಿಣಮಿಸಿದೆ.
ಕೋಲಾರದಲ್ಲಿ ಶಾಸಕಿ ರೂಪಕಲಾ ಶಶಿಧರ್ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸೇರಿದಂತೆ ಕೆಲ ನಾಯಕರ ನಡುವಿನ ಭಿನ್ನಾಭಿಪ್ರಾಯ ಒಂದು ಕಡೆಯಾದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಎಂ.ಸಿ. ಸುಧಾಕರ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ತಿಕ್ಕಾಟ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.
ಈ ಹಿನ್ನೆಲೆಯಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ಗೆ ಸಂಬಂಧಿಸಿದ ವಿಚಾರ ಸೇರಿದಂತೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಶಾಸಕರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಸಭೆಯಲ್ಲಿ ಕೋಲಾರ ಜಿಲ್ಲೆಯ ಶಾಸಕರಾದ ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಶಾಸಕಿ ರೂಪಕಲಾ ಶಶಿಧರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಂ.ಸಿ. ಸುಧಾಕರ್, ಸುಬ್ಬಾರೆಡ್ಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಸಭೆಯ ವೇಳೆ ಶಾಸಕರ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಪಕ್ಷದ ಸಂಘಟನೆ ಹಾಗೂ ಆಡಳಿತದ ವಿಚಾರಗಳಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳು ಬಹಿರಂಗ ಸಂಘರ್ಷಕ್ಕೆ ತಿರುಗದಂತೆ ನಾಯಕರು ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನು ಸಿಎಂ ನೀಡಿದ್ದಾರೆ ಎನ್ನಲಾಗಿದೆ.
ಇದೀಗ ವಿಶೇಷವಾಗಿ ಪ್ರದೀಪ್ ಈಶ್ವರ್–ಎಂ.ಸಿ. ಸುಧಾಕರ್ ನಡುವಿನ ರಾಜಕೀಯ ತಿಕ್ಕಾಟ ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ, ಎರಡು ಜಿಲ್ಲೆಗಳ ಕಾಂಗ್ರೆಸ್ ಶಾಸಕರ ನಡುವಿನ ಭಿನ್ನಮತ ಮುಖ್ಯಮಂತ್ರಿ ಅಂಗಳ ತಲುಪಿರುವುದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಯಕತ್ವ ಈ ಬೆಳವಣಿಗೆಯನ್ನು ಹೇಗೆ ನಿಭಾಯಿಸಲಿದೆ ಎಂಬುದರತ್ತ ಇದೀಗ ರಾಜಕೀಯ ವಲಯದ ಗಮನ ನೆಟ್ಟಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಕರ್ನಾಟಕದ ರಾಜಕೀಯ ಮತ್ತು ಸ್ಥಳೀಯ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadu😘times.com