ಬೆಂಗಳೂರು: ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಾಸಕ ಬಿ. ಸುರೇಶ್ಗೌಡ ಅವರ ಪುತ್ರಿ ಐಶ್ವರ್ಯಾಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಪ್ರಕರಣದ ವಿಚಾರಣೆ ವೇಳೆ ಮಹಿಳಾ ಪಿಎಸ್ಐ ಸವಿತಾ ಪಾಟೀಲ್ ಅವರ ಬಳಿ ಕ್ಷಮೆಯಾಚಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಐಶ್ವರ್ಯಾ ಅವರು ಪಿಎಸ್ಐ ಬಳಿ ಕ್ಷಮೆ ಕೋರಿದ್ದರು. ಇದೀಗ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ದೇವರ ದರ್ಶನದ ವಿಚಾರವಾಗಿ ಐಶ್ವರ್ಯಾ ಹಾಗೂ ಭದ್ರತಾ ಕರ್ತವ್ಯದಲ್ಲಿದ್ದ ಪಿಎಸ್ಐ ಸವಿತಾ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪಿಎಸ್ಐ ಮೇಲೆ ಹಲ್ಲೆ ನಡೆಸಿದ ಆರೋಪ ಐಶ್ವರ್ಯಾ ಅವರ ವಿರುದ್ಧ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ ಐಶ್ವರ್ಯಾ ಅವರು ತಮ್ಮ ನಡೆಗೆ ವಿಷಾದ ವ್ಯಕ್ತಪಡಿಸಿ, ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು.
ಈ ಕ್ಷಮೆಯಾಚನೆಯ ಬಳಿಕ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ಇದೀಗ ಐಶ್ವರ್ಯಾಗೆ ಜಾಮೀನು ಮಂಜೂರಾಗಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ತಾಜಾ ಮತ್ತು ನಿಖರ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.ಕಂ
Tags:#Mandya #Srirangapatna #AishwaryaGowda #SureshGowda #PSI #Police #KarnatakaNews #MandyaNews #CrimeNews #CourtNews #HighCourt #AnticipatoryBail #ಕರ್ನಾಟಕಸುದ್ದಿ #ಮಂಡ್ಯಸುದ್ದಿ #ಶ್ರೀರಂಗಪಟ್ಟಣ #ಐಶ್ವರ್ಯಾಗೌಡ #ಪೊಲೀಸ್ #ನ್ಯಾಯಾಲಯ #ಕರುನಾಡುಟೈಮ್ಸ್