ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯೊಳಗೆ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ದಪ್ಪ ಚರ್ಮದ ಸರ್ಕಾರ. ಸದನದ ಮೂಲಕ ಸರ್ಕಾರಕ್ಕೆ ಚಳಿ ಬಿಡಿಸುವ ಹಾಗೂ ಕಿವಿ ಹಿಂಡುವ ಕೆಲಸವನ್ನು ವಿರೋಧ ಪಕ್ಷವಾಗಿ ಮಾಡುತ್ತೇವೆ” ಎಂದು ಹೇಳಿದರು.
ಹಿಂದಿನ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ಹೋರಾಟದ ಪರಿಣಾಮ ಸರ್ಕಾರದ ಒಬ್ಬ ಸಚಿವರ ರಾಜೀನಾಮೆ ಆಗಿತ್ತು ಎಂದು ಉಲ್ಲೇಖಿಸಿದ ಅಶೋಕ್, ಈ ಬಾರಿಯೂ ಜನರ ಸಮಸ್ಯೆಗಳನ್ನು ಸದನದ ಮುಂದೆ ಪರಿಣಾಮಕಾರಿಯಾಗಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಬರ ಪರಿಸ್ಥಿತಿ ಕುರಿತು ಚರ್ಚೆಗೆ ಒತ್ತಾಯ
ವಿಶೇಷ ಅಧಿವೇಶನವನ್ನು ಕಡಿಮೆ ಅವಧಿಯಲ್ಲಿ ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅಶೋಕ್, ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕನಿಷ್ಠ ಎರಡು ದಿನ ಹೆಚ್ಚುವರಿಯಾಗಿ ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಹೇಳಿದರು.
“ಬರ ಪರಿಸ್ಥಿತಿಯ ಬಗ್ಗೆ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಆದರೆ ನಾಲ್ಕು ತಿಂಗಳ ಹಿಂದೆಯೇ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ತಡವಾಗಿ ಎಚ್ಚೆತ್ತುಕೊಂಡಿರುವುದು ಕೊಳ್ಳೆ ಹೊಡೆದ ಬಳಿಕ ಬಾಗಿಲು ಹಾಕಿದಂತಾಗಿದೆ” ಎಂದು ಟೀಕಿಸಿದರು.
ರೈತರ ಸಮಸ್ಯೆ, ಸಾಲಬಾಧೆ ಹಾಗೂ ಆತ್ಮಹತ್ಯೆ ಪ್ರಕರಣಗಳ ಕುರಿತು ಸದನದಲ್ಲಿ ಸರ್ಕಾರವನ್ನು ಪ್ರಶ್ನಿಸುವುದಾಗಿ ಹೇಳಿದ ಅವರು, ಚಾಮರಾಜನಗರದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನೂ ಚರ್ಚೆಗೆ ತರಲಾಗುವುದು ಎಂದರು.
ಕಸ್ತೂರಿರಂಗನ್ ವರದಿಗೂ ವಿರೋಧ
ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ವಿಚಾರದಲ್ಲೂ ಬಿಜೆಪಿ ತನ್ನ ವಿರೋಧವನ್ನು ಮುಂದುವರಿಸಲಿದೆ ಎಂದು ಆರ್. ಅಶೋಕ್ ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರಗಳ ಅವಧಿಯಲ್ಲಿಯೂ ವರದಿಗೆ ವಿರೋಧ ವ್ಯಕ್ತಪಡಿಸಲಾಗಿತ್ತು. ಜನರ ಜೀವನೋಪಾಯ ಮತ್ತು ಸ್ಥಳೀಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರದಲ್ಲಿ ನಿಲುವು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜೆಡಿಎಸ್ನೊಂದಿಗೆ ಸೇರಿ ಕಸ್ತೂರಿರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿರುವುದಾಗಿ ಹೇಳಿದ ಅಶೋಕ್, ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಎರಡೂ ವಿಚಾರಗಳನ್ನು ವಿಧಾನಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವುದಾಗಿ ಹೇಳಿದರು.
‘ಮತ್ತೊಂದು ವಿಕೆಟ್ ಬೀಳುವ ಭಯವೇ?’
ವಿಶೇಷ ಅಧಿವೇಶನ ಕರೆಯುವ ವಿಚಾರದಲ್ಲೂ ಸರ್ಕಾರದ ಕ್ರಮವನ್ನು ಆರ್. ಅಶೋಕ್ ಪ್ರಶ್ನಿಸಿದರು.
ರೈತರ ಸಮಸ್ಯೆಗಳು, KPSC ನೇಮಕಾತಿ ಅಕ್ರಮದ ಆರೋಪಗಳು ಹಾಗೂ ಬಿಡದಿ ಟೌನ್ಶಿಪ್ ಸೇರಿದಂತೆ ಹಲವು ವಿಚಾರಗಳು ಸದನದಲ್ಲಿ ಚರ್ಚೆಗೆ ಬಾರದಂತೆ ನೋಡಿಕೊಳ್ಳುವ ಉದ್ದೇಶದಿಂದ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂಬ ಆರೋಪವನ್ನು ಅವರು ಮಾಡಿದರು.
“ಸದನದಲ್ಲಿ ಈ ವಿಚಾರಗಳು ಚರ್ಚೆಯಾದರೆ ಸರ್ಕಾರಕ್ಕೆ ಮುಜುಗರವಾಗಬಹುದು. ಮತ್ತೊಂದು ವಿಕೆಟ್ ಬೀಳುವ ಭಯ ಸರ್ಕಾರಕ್ಕೆ ಇರಬಹುದು” ಎಂದು ವ್ಯಂಗ್ಯವಾಡಿದರು.
ವಿಶೇಷ ಅಧಿವೇಶನಕ್ಕೆ ಸಂಬಂಧಿಸಿದ ನಿಯಮಾವಳಿಗಳ ಬಗ್ಗೆಯೂ ಪ್ರಶ್ನೆ ಎತ್ತಿದ ಅವರು, ರಾಜ್ಯಪಾಲರ ಅನುಮೋದನೆ ಸೇರಿದಂತೆ ಸಂವಿಧಾನಾತ್ಮಕ ಹಾಗೂ ಸದನದ ನಿಯಮಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.
ಈಗಾಗಲೇ ವಿವಿಧ ವಿಚಾರಗಳ ಕುರಿತು ನಿಲುವಳಿ ಸೂಚನೆಗಳನ್ನು ಸಲ್ಲಿಸಲಾಗಿದ್ದು, ಜನರ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿಯಾಗುವುದಾಗಿ ಆರ್. ಅಶೋಕ್ ತಿಳಿಸಿದರು.
ವರದಿ: ನವೀನ್ ಕುಮಾರ್
🌐 ಇಂತಹ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ:
👉 www.karunaadutimes.com ಗೆ ಭೇಟಿ ನೀಡಿ
🔖 Tags:#ಆರ್_ಅಶೋಕ್ #ಆರ್ಅಶೋಕ್ #ವಿಧಾನಸಭೆ #ಕರ್ನಾಟಕ_ರಾಜಕೀಯ #ವಿಶೇಷ_ಅಧಿವೇಶನ #ಬರ_ಪರಿಸ್ಥಿತಿ #ರೈತರ_ಸಮಸ್ಯೆ #ರೈತರ_ಆತ್ಮಹತ್ಯೆ #ಕಸ್ತೂರಿರಂಗನ್_ವರದಿ #KPSC #ಬಿಡದಿ_ಟೌನ್ಶಿಪ್ #ಬೆಂಗಳೂರು #ಕರ್ನಾಟಕ #ರಾಜಕೀಯ_ಸುದ್ದಿ #ವಿಧಾನಸಭೆ_ಕಲಾಪ #ಕರ್ನಾಟಕ_ಸುದ್ದಿ #KarunaaduTimes #KarunaaduTimesNews