ಕೊಪ್ಪಳ: ಮನೆಯ ಮುಂದೆ ನಿಂತಿದ್ದ 91 ವರ್ಷದ ವೃದ್ಧೆಯೊಬ್ಬರಿಗೆ ಕೋತಿ ದಾಳಿ ನಡೆಸಿ ತಳ್ಳಿದ ಪರಿಣಾಮ, ಅವರು ನೆಲಕ್ಕುರುಳಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕೊಪ್ಪಳ ನಗರದ ಬಿ.ಟಿ. ಪಾಟೀಲ್ ನಗರದಲ್ಲಿ ನಡೆದಿದೆ.
ಮೃತರನ್ನು ನಜಮುನಿಸಾ ಬೇಗಂ (91) ಎಂದು ಗುರುತಿಸಲಾಗಿದೆ. ಮನೆ ಮುಂದೆ ನಿಂತಿದ್ದ ವೇಳೆ ಏಕಾಏಕಿ ಕೋತಿ ಅವರ ಮೇಲೆ ದಾಳಿ ನಡೆಸಿದೆ. ಕೋತಿಯ ತಳ್ಳುವಿಕೆಯಿಂದ ನಿಯಂತ್ರಣ ಕಳೆದುಕೊಂಡ ನಜಮುನಿಸಾ ಬೇಗಂ ನೆಲಕ್ಕೆ ಬಿದ್ದಿದ್ದು, ಈ ವೇಳೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವೃದ್ಧೆ ನೆಲಕ್ಕುರುಳಿದ್ದನ್ನು ಕಂಡು ಅವರನ್ನು ಎಬ್ಬಿಸಲು ಮುಂದಾದ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವೃದ್ಧೆಯ ಸಾವಿನಿಂದ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದ್ದು, ಜನನಿಬಿಡ ಪ್ರದೇಶಗಳಲ್ಲಿ ಕೋತಿಗಳ ಹಾವಳಿ ನಿಯಂತ್ರಿಸುವ ಅಗತ್ಯದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ: ನವೀನ್ ಕುಮಾರ್
🔖 tags :#Koppal #ಕೊಪ್ಪಳ #BTPatilNagar #ಕೋತಿದಾಳಿ #MonkeyAttack #ವೃದ್ಧೆಸಾವು #KoppalNews #ಕೊಪ್ಪಳಸುದ್ದಿ #ಕರ್ನಾಟಕಸುದ್ದಿ #BreakingNews #LocalNews #ViralNews #CCTVFootage #MonkeyMenace