ಬೆಂಗಳೂರು: ರಾಜಧಾನಿಯಲ್ಲಿ ನಕಲಿ ಔಷಧಿಗಳ ಪೂರೈಕೆ ಮತ್ತು ಮಾರಾಟದ ಆರೋಪಕ್ಕೆ ಸಂಬಂಧಿಸಿದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರಕರಣದಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳ ಫಾರ್ಮಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ತನಿಖಾ ತಂಡದ (SIT) ಶಿಫಾರಸಿನ ಆಧಾರದ ಮೇಲೆ ಔಷಧ ನಿಯಂತ್ರಣ ಇಲಾಖೆ ನಾಲ್ಕು ಫಾರ್ಮಸಿಗಳ ಪರವಾನಗಿಯನ್ನು ರದ್ದುಪಡಿಸಿದೆ.
ನಕಲಿ ಔಷಧಿ ಪೂರೈಕೆಯ ಜಾಲ ವಿಸ್ತಾರವಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ, ನಗರದ 25ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ಹಂತ ಹಂತವಾಗಿ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಬೆಂಗಳೂರಿನ ಸುಮಾರು 70ರಿಂದ 80 ಆಸ್ಪತ್ರೆಗಳು, ಕ್ಲಿನಿಕ್ಗಳು ಹಾಗೂ ಮೆಡಿಕಲ್ ಸ್ಟೋರ್ಗಳಿಗೆ ನಕಲಿ ಔಷಧಿಗಳು ತಲುಪಿರುವ ಶಂಕೆ ವ್ಯಕ್ತವಾಗಿದೆ.
ಫಾರ್ಮಸಿಗಳಿಗೆ ಬೀಗ
ಲೈಸೆನ್ಸ್ ರದ್ದಾಗಿರುವ ನಾಲ್ಕು ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧ ಮಾರಾಟ ನಡೆಸದಂತೆ ಅಧಿಕಾರಿಗಳು ಸೂಚನೆ ನೀಡಿದ್ದು, ಸಂಬಂಧಿತ ಫಾರ್ಮಸಿಗಳನ್ನು ಮುಚ್ಚಿಸಲಾಗಿದೆ. ನಕಲಿ ಔಷಧಿ ಪೂರೈಕೆಯ ಕುರಿತು ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ಫಾರ್ಮಸಿ ಮುಖ್ಯಸ್ಥರಿಂದ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸಲು ತನಿಖಾ ತಂಡ ಮುಂದಾಗಿದೆ.
ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮಿನರ್ವ ಸರ್ಕಲ್ ಸಮೀಪದ ಕೃಪಾ ಹೆಲ್ತ್ ಕೇರ್ ಮೇಲೆ ಎಸ್ಐಟಿ ದಾಳಿ ನಡೆಸಿತ್ತು. ಅಲ್ಲಿಂದಲೇ ನಗರದ ಹಲವು ಫಾರ್ಮಸಿಗಳಿಗೆ ನಕಲಿ ಔಷಧಿಗಳು ಪೂರೈಕೆಯಾಗಿರುವ ಆರೋಪ ಬೆಳಕಿಗೆ ಬಂದಿದ್ದು, ಅದರ ಆಧಾರದ ಮೇಲೆ ತನಿಖೆ ವಿಸ್ತರಿಸಲಾಗಿದೆ.
ಪ್ರತಿಷ್ಠಿತ ಆಸ್ಪತ್ರೆ ಫಾರ್ಮಸಿಗೂ ಸಂಕಷ್ಟ
ಬನಶಂಕರಿ 2ನೇ ಹಂತದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯ ಫಾರ್ಮಸಿಯು ಕೃಪಾ ಹೆಲ್ತ್ ಕೇರ್ನಿಂದ ಹೆಚ್ಚಿನ ಪ್ರಮಾಣದಲ್ಲಿ ಔಷಧಿಗಳನ್ನು ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Drugs and Cosmetics Act ಅಡಿಯಲ್ಲಿ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಸಂಬಂಧಿತ ಫಾರ್ಮಸಿಯ ಲೈಸೆನ್ಸ್ ರದ್ದುಪಡಿಸಲಾಗಿದೆ.
ಗಂಭೀರ ಸೋಂಕುಗಳಿಗೆ ಬಳಸುವ ಔಷಧಿಯೇ ನಕಲಿ?
ತನಿಖೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಝವಿಸೆಫ್ಟಾ (Zavicefta) ಎಂಬ ಆ್ಯಂಟಿಬಯೋಟಿಕ್ ನಕಲಿ ರೂಪದಲ್ಲಿ ಪೂರೈಕೆಯಾಗಿರುವುದು ಪತ್ತೆಯಾಗಿದೆ. ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಈ ಔಷಧಿಯ ನಕಲಿ ಆವೃತ್ತಿ ಪೂರೈಕೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
2025ರಿಂದ ಸತತವಾಗಿ ಸುಮಾರು ಎಂಟು ತಿಂಗಳ ಅವಧಿಯಲ್ಲಿ ಈ ಔಷಧಿ ಕೆಲವು ಫಾರ್ಮಸಿಗಳಲ್ಲಿ ಮಾರಾಟವಾಗಿರುವ ಮಾಹಿತಿ ತನಿಖಾ ತಂಡದ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಇದರಿಂದಾಗಿ ಆ ಅವಧಿಯಲ್ಲಿ ಚಿಕಿತ್ಸೆ ಪಡೆದ ಗಂಭೀರ ಸ್ಥಿತಿಯಲ್ಲಿದ್ದ ಹಾಗೂ ಐಸಿಯುನಲ್ಲಿ ದಾಖಲಾಗಿದ್ದ ರೋಗಿಗಳಿಗೆ ನಕಲಿ ಔಷಧಿ ನೀಡಲಾಗಿತ್ತೇ? ಎಂಬ ಆತಂಕವೂ ಮೂಡಿದೆ. ಈ ಕುರಿತು ನಿಖರ ಮಾಹಿತಿ ಪಡೆಯಲು ಎಸ್ಐಟಿ ತನಿಖೆಯನ್ನು ಮತ್ತಷ್ಟು ವಿಸ್ತರಿಸಿದೆ.
ಪೂರೈಕೆ ಜಾಲದ ಬೆನ್ನತ್ತಿದ ತನಿಖೆ
ನಕಲಿ ಔಷಧಿಗಳು ಯಾವ ಮೂಲದಿಂದ ಬಂದವು? ಯಾವೆಲ್ಲ ಆಸ್ಪತ್ರೆ, ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರ್ಗಳಿಗೆ ಪೂರೈಕೆಯಾಗಿವೆ? ಈ ಔಷಧಿಗಳನ್ನು ಎಷ್ಟು ಮಂದಿ ರೋಗಿಗಳಿಗೆ ನೀಡಲಾಗಿದೆ? ಎಂಬ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತನಿಖೆ ಮುಂದುವರಿದಿದೆ.
ರೋಗಿಗಳ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳಲ್ಲೇ ಅಕ್ರಮ ನಡೆದಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದ್ದು, ತನಿಖೆಯ ಸಂಪೂರ್ಣ ಚಿತ್ರಣ ಹೊರಬಂದ ಬಳಿಕ ಪ್ರಕರಣದ ವ್ಯಾಪ್ತಿ ಇನ್ನಷ್ಟು ಸ್ಪಷ್ಟವಾಗುವ ಸಾಧ್ಯತೆಯಿದೆ.
📍 ಬೆಂಗಳೂರು | ನಕಲಿ ಔಷಧಿ ಜಾಲ
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸ್ಥಳೀಯ, ರಾಜ್ಯ ಮತ್ತು ವಿಶೇಷ ಸುದ್ದಿಗಳಿಗಾpಗಿ ಭೇಟಿ ನೀಡಿ:
👉 www.karunaadutimes.com
Tags:#Bengaluru #ಬೆಂಗಳೂರು #FakeMedicine #ನಕಲಿಔಷಧಿ #DrugControlDepartment #SIT #ನಕಲಿಔಷಧಿಜಾಲ #HospitalPharmacy #Pharmacy #Zavicefta #Antibiotic #DrugsAndCosmeticsAct #HealthNews #BengaluruNews #KarnatakaNews #ಕರ್ನಾಟಕಸುದ್ದಿ #ಆರೋಗ್ಯಸುದ್ದಿ #CrimeNpews #KarunaaduTimes