ಬೆಂಗಳೂರು: ನಗರದ ಕೋರಮಂಗಲ ಪೊಲೀಸ್ ಠಾಣೆ ಮುಂಭಾಗದಲ್ಲೇ ಐಷಾರಾಮಿ ಕಾರೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಬೆಳಗಿನ ಜಾವ ಕಾರಿನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ಪ್ರಕಾರ, ರಾತ್ರಿ ಸುಮಾರು 2.36ರ ವೇಳೆಗೆ ಕೋರಮಂಗಲ ಪೊಲೀಸ್ ಠಾಣೆ ಮುಂಭಾಗದ ಫಾಸ್ಟ್ಫುಡ್ ಹೋಟೆಲ್ ಸಮೀಪ ಐಷಾರಾಮಿ ಕಾರೊಂದು ನಿಂತಿತ್ತು. ಬೆಳಗ್ಗೆ ಕಾರನ್ನು ಗಮನಿಸಿದಾಗ ಅದರೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕೋರಮಂಗಲ ಪೊಲೀಸರು ಹಾಗೂ ಸೋಕೋ ತನಿಖಾ ತಂಡ ಸ್ಥಳಕ್ಕೆ ಧಾವಿಸಿ ಕಾರು ಮತ್ತು ಮೃತದೇಹವನ್ನು ಪರಿಶೀಲಿಸಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಮೃತ ವ್ಯಕ್ತಿಯನ್ನು ಸಲೀಂ ಅಕ್ಬರ್ ಎಂದು ಗುರುತಿಸಲಾಗಿದೆ.
ಆರಂಭಿಕ ತನಿಖೆಯ ಪ್ರಕಾರ, ಸಲೀಂ ಅಕ್ಬರ್ ಅವರು ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆ ಹಾಗೂ ವೈದ್ಯಕೀಯ ಪರೀಕ್ಷೆಯ ಬಳಿಕ ಸ್ಪಷ್ಟವಾಗಬೇಕಿದೆ.
ಬಿಸಿನೆಸ್ ಕೆಲಸದ ನಿಮಿತ್ತ ಸಲೀಂ ಅವರು ಮಡಿಕೇರಿಯಿಂದ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಇದೀಗ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ಹಿಂದಿನ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ಠಾಣೆಯ ಎದುರಲ್ಲೇ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದು, ಪೊಲೀಸರ ತನಿಖೆಯತ್ತ ಇದೀಗ ಗಮನ ನೆಟ್ಟಿದೆ.
ವರದಿ: ನವೀನ್ ಕುಮಾರ್
Tags:#Bengaluru #Koramangala #KoramangalaPolice #BengaluruNews #CrimeNews #DeathNews #LuxuryCar #SalimAkbar #HeartAttack #PoliceInvestigation #KarnatakaNews #ಬೆಂಗಳೂರು #ಕೋರಮಂಗಲ #ಬೆಂಗಳೂರುಸುದ್ದಿ #ಮೃತದೇಹ #ಪೊಲೀಸ್_ತನಿಖೆ #ಹೃದಯಾಘಾತ