ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪದ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ KPSC ಸದಸ್ಯೆ ಶಾಂತಾ ಹೊಸಮನಿ ಅವರ ದಾವಣಗೆರೆ ನಿವಾಸದಲ್ಲಿ CID ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆ ನಗರದ ತರಳಬಾಳು ಬಡಾವಣೆಯಲ್ಲಿರುವ ಶಾಂತಾ ಹೊಸಮನಿ ಅವರ ನಿವಾಸಕ್ಕೆ CID ತಂಡ ತೆರಳಿ ಶೋಧ ನಡೆಸಿದೆ. ಆದರೆ ಕಳೆದ ಸುಮಾರು ಎಂಟು ತಿಂಗಳಿನಿಂದ ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಮನೆಗೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ವಿದ್ಯಾನಗರ ಪೊಲೀಸರಿಂದ ಮನೆಯ ಕುರಿತ ಮಾಹಿತಿ ಹಾಗೂ ಅಗತ್ಯ ವಿವರಗಳನ್ನು CID ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಬಳಿಕ ಅಧಿಕಾರಿಗಳ ತಂಡ ಅಲ್ಲಿಂದ ಹಿಂದಿರುಗಿದೆ ಎಂದು ತಿಳಿದುಬಂದಿದೆ.
ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶಾಂತಾ ಹೊಸಮನಿ
ಶಾಂತಾ ಹೊಸಮನಿ ಅವರು ಸುಮಾರು ಐದು ವರ್ಷಗಳ ಹಿಂದೆ ದಾವಣಗೆರೆ ತಾಲೂಕಿನ ಹೊನ್ನೂರು ಹಾಗೂ ಹರಿಹರದ ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ನಂತರ ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ದಾವಣಗೆರೆಯಲ್ಲಿದ್ದ ತಮ್ಮ ಮನೆಯನ್ನು ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ. ಆದರೆ ಕಳೆದ ಎಂಟು ತಿಂಗಳಿನಿಂದ ಮನೆ ಖಾಲಿಯಾಗಿದ್ದು, ಯಾರೂ ವಾಸಿಸುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿರುವ ಸಂದರ್ಭದಲ್ಲಿ ಮಾಜಿ KPSC ಸದಸ್ಯೆಯ ನಿವಾಸಕ್ಕೆ CID ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಪ್ರಕರಣದ ತನಿಖೆಯ ದೃಷ್ಟಿಯಿಂದ ಗಮನ ಸೆಳೆದಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
ವರದಿ: ನವೀನ್ ಕುಮಾರ್
📍 ದಾವಣಗೆರೆ | 🔎 KPSC ಹಗರಣ | CID ತನಿಖೆ
Tags:#KPSCScam #KPSC #CID #ShanthaHosamani #Davanagere #KPSCRecruitment #VeterinaryOfficerRecruitment #CIDInvestigation #KarnatakaNews #DavanagereNews #Karnataka #ನೇಮಕಾತಿಅಕ್ರಮ #KPSCಹಗರಣ #ದಾವಣಗೆರೆ #CIDಶೋಧ