ಚಿಕ್ಕಬಳ್ಳಾಪುರ: ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಮೃತರನ್ನು ಆಂಧ್ರಪ್ರದೇಶದ ಹಿಂದೂಪುರ ಮೂಲದ 21 ವರ್ಷದ ಸಾಯಿ ತರುಣ್ ರೆಡ್ಡಿ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಾಯಿ ತರುಣ್, ಗಂಗಮ್ಮಗುಡಿ ರಸ್ತೆಯಲ್ಲಿರುವ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.
ಬೆಳಗ್ಗೆಯೇ ಸ್ನೇಹಿತರಿಂದ ಗಮನಕ್ಕೆ ಬಂದ ಘಟನೆ
ಸಾಯಿ ತರುಣ್ ಎಂದಿನಂತೆ ಕಾಲೇಜಿಗೆ ತೆರಳಬೇಕಿತ್ತು. ಬೆಳಗ್ಗೆ ಸ್ನೇಹಿತನೊಬ್ಬ ಅವರ ಕೊಠಡಿಗೆ ಬಂದು ಬಾಗಿಲು ತಟ್ಟಿದ್ದಾನೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ವಿದ್ಯಾರ್ಥಿ ನಿದ್ರಿಸುತ್ತಿರಬಹುದು ಎಂದು ಭಾವಿಸಿದ ಸ್ನೇಹಿತ ಕಾಲೇಜಿಗೆ ತೆರಳಿದ್ದಾನೆ.
ಆದರೆ ಕಾಲೇಜಿಗೂ ಸಾಯಿ ತರುಣ್ ಹಾಜರಾಗದ ಹಿನ್ನೆಲೆಯಲ್ಲಿ ಸ್ನೇಹಿತರಿಗೆ ಅನುಮಾನ ಮೂಡಿದೆ. ಮೊಬೈಲ್ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತೆ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಬಾಗಿಲು ತೆರೆದು ನೋಡಿದಾಗ ಸಾಯಿ ತರುಣ್ ಮೃತಪಟ್ಟಿರುವುದು ಪತ್ತೆಯಾಗಿದೆ.
ಪೊಲೀಸರಿಂದ ಸ್ಥಳ ಪರಿಶೀಲನೆ
ಘಟನೆ ಕುರಿತು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.
ಇತ್ತ ಮಗನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಯುವ ವಿದ್ಯಾರ್ಥಿಯ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ಆಘಾತ ಮೂಡಿಸಿದೆ.
ವರದಿ: ನವೀನ್ ಕುಮಾರ್