ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದು 39 ವರ್ಷದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕುಡುವತಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕಲ್ಪನಾ ಎಂದು ಗುರುತಿಸಲಾಗಿದೆ.
ಕಲ್ಪನಾ ಅವರು ಸುಮಾರು 20 ವರ್ಷಗಳ ಹಿಂದೆ ಕುಡುವತಿ ಗ್ರಾಮದ ತಮ್ಮೇಗೌಡ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಲ್ಪನಾ ಅವರು ಕುಡುವತಿ ಗ್ರಾಮದ ತಮ್ಮ ತವರು ಮನೆಯಲ್ಲೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಈ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ಮಾಹಿತಿ ತಿಳಿಯುತ್ತಿದ್ದಂತೆ ನಂದಿಗಿರಿಧಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ: ನವೀನ್ ಕುಮಾರ್
Tags:#ಚಿಕ್ಕಬಳ್ಳಾಪುರ #ಕುಡುವತಿ #ಚಿಕ್ಕಬಳ್ಳಾಪುರಸುದ್ದಿ #ಮಹಿಳೆಸಾವು #ಅನುಮಾನಾಸ್ಪದಸಾವು #ಬಾವಿಗೆಬಿದ್ದುಸಾವು #ಕೌಟುಂಬಿಕಕಲಹ #ನಂದಿಗಿರಿಧಾಮ #ಕರ್ನಾಟಕಸುದ್ದಿ #ಕ್ರೈಂನ್ಯೂಸ್ #KarunaaduTimes