ಬೆಂಗಳೂರು: ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ ಬರೋಬ್ಬರಿ 37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘ ಚುನಾವಣೆಗಳು ಮತ್ತೆ ನಡೆಯುವ ಸಾಧ್ಯತೆ ನಿರ್ಮಾಣವಾಗಿದೆ. ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಮರುಅನುಮತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕಾಲೇಜುಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗೂಂಡಾಗಿರಿ ಹಾಗೂ ರಾಜಕೀಯ ಹಸ್ತಕ್ಷೇಪದ ಆರೋಪಗಳ ಹಿನ್ನೆಲೆಯಲ್ಲಿ 1989ರಲ್ಲಿ ಆಗಿನ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರ ವಿದ್ಯಾರ್ಥಿ ಸಂಘಗಳ ಚುನಾವಣೆಗಳಿಗೆ ನಿಷೇಧ ಹೇರಿತ್ತು. ಇದೀಗ ಹಲವು ದಶಕಗಳ ಬಳಿಕ ಆ ನಿರ್ಬಂಧವನ್ನು ತೆರವುಗೊಳಿಸಿ ವಿದ್ಯಾರ್ಥಿ ಚುನಾವಣೆಗಳಿಗೆ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.
🗳️ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ಉದ್ದೇಶ
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ, ಸಂಘಟನಾ ಸಾಮರ್ಥ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಚುನಾವಣೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಸರ್ಕಾರದ ನಿರ್ಧಾರದಲ್ಲಿ ತಿಳಿಸಲಾಗಿದೆ.
ಆದರೆ, ಪ್ರತಿಯೊಂದು ಕಾಲೇಜಿನಲ್ಲೂ ಚುನಾವಣೆ ಕಡ್ಡಾಯವಾಗಿರುವುದಿಲ್ಲ. ಚುನಾವಣೆ ನಡೆಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಸಂಬಂಧಪಟ್ಟ ಕಾಲೇಜಿನ ಆಡಳಿತ ಮಂಡಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳೇ ಚುನಾವಣೆ ಬೇಡ ಎಂದು ನಿರ್ಧರಿಸಿದರೆ, ಅಂತಹ ಕಾಲೇಜುಗಳಲ್ಲಿ ಚುನಾವಣೆ ನಡೆಯುವುದಿಲ್ಲ.
👥 ವಿದ್ಯಾರ್ಥಿ ಸಂಘದಲ್ಲಿ ಯಾರೆಲ್ಲ ಇರಲಿದ್ದಾರೆ?
ಪ್ರಸ್ತಾವಿತ ವಿದ್ಯಾರ್ಥಿ ಸಂಘದಲ್ಲಿ:
🔹 ಒಬ್ಬ ಅಧ್ಯಕ್ಷ
🔹 ಒಬ್ಬ ಮಹಿಳಾ ಪ್ರತಿನಿಧಿ ಸೇರಿದಂತೆ ಇಬ್ಬರು ಉಪಾಧ್ಯಕ್ಷರು
🔹 ಒಬ್ಬ ಕಾರ್ಯದರ್ಶಿ
🔹 ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಜಂಟಿ ಕಾರ್ಯದರ್ಶಿಗಳು
ಆಯ್ಕೆಯಾಗಲಿದ್ದಾರೆ ಎಂದು ತಿಳಿಸಲಾಗಿದೆ.
ಈ ಚುನಾವಣೆಯಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಅಲ್ಲದೆ, ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ನೇರ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
📢 ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಸುಳಿವು ಈಗ ನಿರ್ಧಾರ?
ಕಳೆದ ಜೂನ್ನಲ್ಲಿ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಸ್ಥಗಿತಗೊಂಡಿರುವ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ಇದೇ ವರ್ಷದಿಂದ ಪುನರಾರಂಭಿಸುವುದಾಗಿ ಹೇಳಿದ್ದರು.
ಇದೀಗ ಸಚಿವ ಸಂಪುಟದ ನಿರ್ಧಾರದೊಂದಿಗೆ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ವಿದ್ಯಾರ್ಥಿ ರಾಜಕೀಯಕ್ಕೆ ಮತ್ತೆ ವೇದಿಕೆ ಸಿಗುವ ನಿರೀಕ್ಷೆ ಮೂಡಿದೆ.
🎓 37 ವರ್ಷಗಳ ಬಳಿಕ ಕ್ಯಾಂಪಸ್ಗಳಲ್ಲಿ ಮತ್ತೆ ಮತದಾನ...
🗳️ ವಿದ್ಯಾರ್ಥಿಗಳ ಕೈಗೆ ಮತ್ತೆ ಚುನಾವಣೆಯ ಅಧಿಕಾರ...
⚖️ ಆದರೆ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ಸವಾಲು ಸರ್ಕಾರದ ಮುಂದಿದೆ!
📌 ಈ ನಿರ್ಧಾರದಿಂದ ರಾಜ್ಯದ ಕಾಲೇಜು ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿ ನಾಯಕತ್ವದ ಹೊಸ ಅಧ್ಯಾಯ ಆರಂಭವಾಗಲಿದೆಯೇ?
✍️ ವರದಿ: ನವೀನ್ ಕುಮಾರ್
🌐 ಇನ್ನಷ್ಟು ಕರ್ನಾಟಕದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.ಕಂ