ಬೆಂಗಳೂರು: ಗಣೇಶ ಚತುರ್ಥಿ ಆಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಾರ್ವಜನಿಕ ಗಣೇಶೋತ್ಸವ ಆಯೋಜಕರಿಗೆ ಹಾಗೂ ಮೂರ್ತಿ ತಯಾರಕರು, ಮಾರಾಟಗಾರರಿಗೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ POP ಗಣೇಶ ಮೂರ್ತಿಗಳ ತಯಾರಿಕೆ ಅಥವಾ ಮಾರಾಟ ನಡೆಸುವುದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
🪔 ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ
ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಉತ್ಸವ ನಡೆಸಲು ಆಯೋಜಕರು ಪೂರ್ವಾನುಮತಿ ಪಡೆಯಬೇಕು. ಇದಕ್ಕಾಗಿ ವಾರ್ಡ್ವಾರು ನೋಡಲ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅರ್ಜಿ ಸಲ್ಲಿಸಿದ ಬಳಿಕ ಒಂದೇ ದಿನದಲ್ಲಿ ಪರಿಶೀಲನೆ ನಡೆಸಿ ಅನುಮತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಅರ್ಜಿಗಳ ತ್ವರಿತ ವಿಲೇವಾರಿಗಾಗಿ GBA ವ್ಯಾಪ್ತಿಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರಲಾಗಿದೆ.
🌱 ಮನೆಯಲ್ಲೇ ವಿಸರ್ಜನೆ; ಮಣ್ಣನ್ನು ಮರುಬಳಕೆ ಮಾಡಿ
ಮನೆಯಲ್ಲೇ ಗಣೇಶ ಮೂರ್ತಿಯನ್ನು ವಿಸರ್ಜಿಸುವವರಿಗೆ ಉಳಿಯುವ ಮಣ್ಣನ್ನು ಹೊರಗೆ ಎಸೆಯದೆ ಮನೆಯಲ್ಲೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ಈ ಮಣ್ಣನ್ನು ಹೂಕುಂಡ, ಕೈತೋಟ ಸೇರಿದಂತೆ ಮನೆಯ ತೋಟಗಾರಿಕೆಯಲ್ಲಿ ಮರುಬಳಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಇನ್ನು GBA ನಿಗದಿಪಡಿಸಿರುವ ವಿಸರ್ಜನಾ ಸ್ಥಳಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಮೂರ್ತಿ ವಿಸರ್ಜನೆ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
🚫 ಗಣೇಶೋತ್ಸವದಲ್ಲಿ ಪ್ಲಾಸ್ಟಿಕ್ಗೂ ಬ್ರೇಕ್
ಗಣೇಶೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಉತ್ಸವದ ವೇಳೆ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಆಯೋಜಕರಿಗೆ ದಂಡ ವಿಧಿಸಲಾಗುವುದು ಎಂದು ಸೂಚಿಸಲಾಗಿದೆ.
🔊 ಪೆಂಡಾಲ್, ಧ್ವನಿವರ್ಧಕಕ್ಕೂ ಶುಲ್ಕ ಕಡ್ಡಾಯ
ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಪೆಂಡಾಲ್ ಅಳವಡಿಕೆ ಹಾಗೂ ಧ್ವನಿವರ್ಧಕಗಳ ಬಳಕೆಗೆ ನಿಗದಿತ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.
ಶುಲ್ಕವನ್ನು ಸ್ಥಳೀಯ ಪೊಲೀಸ್ ಠಾಣೆ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಶುಲ್ಕ ಪಾವತಿಯ ರಸೀದಿಯನ್ನು ಅನುಮತಿ ಅರ್ಜಿಯೊಂದಿಗೆ ಸಲ್ಲಿಸಿದ ಬಳಿಕವೇ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗುವುದು ಎಂದು GBA ಸುತ್ತೋಲೆಯಲ್ಲಿ ತಿಳಿಸಿದೆ.
⚠️ ನಿಯಮ ಪಾಲನೆಯೊಂದಿಗೆ ಹಬ್ಬ ಆಚರಿಸಿ
ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ ಪರಿಸರ ಸಂರಕ್ಷಣೆ, ಸಾರ್ವಜನಿಕ ಸುರಕ್ಷತೆ ಹಾಗೂ ಸ್ಥಳೀಯ ನಿಯಮಗಳನ್ನು ಪಾಲಿಸುವಂತೆ ಪ್ರಾಧಿಕಾರ ಸೂಚಿಸಿದೆ.
ವರದಿ: ನವೀನ್ ಕುಮಾರ್
🌐 ಬೆಂಗಳೂರು ಸೇರಿದಂತೆ ಕರ್ನಾಟಕದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ
👉 www.karunaadutimes.ಕಂ
Tags:#ಬೆಂಗಳೂರು #BengaluruNews #GaneshChaturthi #ಗಣೇಶಚತುರ್ಥಿ #ಗಣೇಶೋತ್ಸವ #POPGanesh #POPBan #GBA #GreaterBengaluruAuthority #PlasticBan #GaneshIdol #GaneshVisarjan #KarnatakaNews #KannadaNews #BreakingNews #Bengaluru #KarunaaduTimes #ಕರ್ನಾಟಕಸುದ್ದಿ