ಕೋಲಾರ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಮನೆಯ ಸಂಪ್ನಲ್ಲಿ ಬಚ್ಚಿಟ್ಟಿರುವ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಸಮೀಪದ ಸೊಣ್ಣೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸೊಣ್ಣೇನಹಳ್ಳಿ ಗ್ರಾಮದ ವೆಂಕಟೇಶ್ (36) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ವೆಂಕಟೇಶ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಸುರೇಶ್ಗೆ ಇತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಸುರೇಶ್ ಮತ್ತು ಆತನ ಸ್ನೇಹಿತ ಸಂತೋಷ್, ವೆಂಕಟೇಶ್ನನ್ನು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿದ್ದರೆನ್ನಲಾಗಿದೆ.
ಈ ವೇಳೆ ಮೂವರ ನಡುವೆ ನಡೆದ ಮಾತಿನ ಚಕಮಕಿಯ ಬಳಿಕ ವೆಂಕಟೇಶ್ನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಆರೋಪವಿದೆ. ಬಳಿಕ ಮೃತದೇಹವನ್ನು ಮನೆಯ ಸಂಪ್ಗೆ ಹಾಕಿ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸಂಪ್ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣ, ಆರೋಪಿಗಳ ಪಾತ್ರ ಹಾಗೂ ಘಟನೆ ನಡೆದ ಸಂದರ್ಭದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾನೆಂಬ ಶಂಕೆ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಯಿತು?
ಮದ್ಯದ ಪಾರ್ಟಿ ಕೊಲೆಯಲ್ಲಿ ಅಂತ್ಯಗೊಂಡಿತೇ?
ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸ್ಥಳೀಯ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.com