ಬೆಂಗಳೂರು: ಕರ್ತವ್ಯದಲ್ಲಿದ್ದ ಜೈಲು ಸಿಬ್ಬಂದಿಯೊಬ್ಬರ ಮೇಲೆ ಐವರು ಕೈದಿಗಳು ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೇಳಿಬಂದಿದೆ. ಘಟನೆ ಸೆಪ್ಟೆಂಬರ್ 2ರಂದು ನಡೆದಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ⚠️
ಹಲ್ಲೆಗೊಳಗಾದವರನ್ನು ಮಂಜುನಾಥ್ ಹವೇಲಿ ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
⚠️ ಕೊಠಡಿಗೆ ಎಳೆದೊಯ್ದು ಹಲ್ಲೆ ಆರೋಪ
ಸೆಪ್ಟೆಂಬರ್ 2ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಶಿಕ್ಷಾ ಬಂಧಿ ವಿಭಾಗಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೆಲ ಕೈದಿಗಳು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕಾಏಕಿ ಮೂಗಿಗೆ ಗುದ್ದಿದರು ಎಂದು ಮಂಜುನಾಥ್ ದೂರಿನಲ್ಲಿ ಆರೋಪಿಸಿದ್ದಾರೆ.
ಬಳಿಕ ಐವರು ಆರೋಪಿಗಳು ಅವರನ್ನು ಕೊಠಡಿ ಸಂಖ್ಯೆ 04ಕ್ಕೆ ಎಳೆದೊಯ್ದು ಮನಬಂದಂತೆ ಹಲ್ಲೆ ನಡೆಸಿದರು ಎನ್ನಲಾಗಿದೆ. ಇದೇ ವೇಳೆ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಉಸಿರುಗಟ್ಟಿಸುವ ಮೂಲಕ ಕೊಲೆಗೆ ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಕರ್ತವ್ಯದಲ್ಲಿದ್ದ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಮಂಜುನಾಥ್ ಅವರನ್ನು ರಕ್ಷಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 🚨
👥 ಐವರು ಕೈದಿಗಳ ವಿರುದ್ಧ ದೂರು
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಘಾನ್, ಮೊಹಮ್ಮದ್ ರಿಜ್ವಾನ್, ನಯಾಜ್ ಹಾಗೂ ಕಲಂದರ್ ಶಫಿ ಎಂಬ ಐವರು ಕೈದಿಗಳ ವಿರುದ್ಧ ಆರೋಪ ಮಾಡಲಾಗಿದೆ.
ಈ ಐವರು ಮಂಗಳೂರಿನ ಭಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
🔎 ಹಲ್ಲೆಗೆ ಹಳೆಯ ವೈಷಮ್ಯವೇ ಕಾರಣ?
ಸುಮಾರು ಒಂದು ತಿಂಗಳ ಹಿಂದೆ ಕೆಲ ಕೈದಿಗಳನ್ನು ಭದ್ರತಾ ವಿಭಾಗದಿಂದ ಅನೆಕ್ಸ್-1 ಕಾರಾಗೃಹಕ್ಕೆ ವರ್ಗಾಯಿಸುವ ಸಂದರ್ಭದಲ್ಲಿ ಅವರ ಹೆಚ್ಚುವರಿ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಂಜುನಾಥ್ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.
ಬಂಧಿಗಳ ವಸ್ತುಗಳ ತಪಾಸಣೆ ನಡೆಸಿದ ವಿಚಾರದಲ್ಲೂ ಮಂಜುನಾಥ್ ಮತ್ತು ಕೆಲ ಕೈದಿಗಳ ನಡುವೆ ಈ ಹಿಂದೆ ವಾಗ್ವಾದ ನಡೆದಿತ್ತು ಎಂದು ತಿಳಿದುಬಂದಿದೆ.
ಇದಲ್ಲದೆ, ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ಕಾರಣದಿಂದ ಹಳೆಯ ವೈಷಮ್ಯ ಬೆಳೆದು ಹಲ್ಲೆ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ⚖️
ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
📲 ಬೆಂಗಳೂರು ಸೇರಿದಂತೆ ರಾಜ್ಯದ ಅಪರಾಧ, ಕಾನೂನು ಮತ್ತು ಪ್ರಮುಖ ಸುದ್ದಿಗಳ ತಾಜಾ ಅಪ್ಡೇಟ್ಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ👇
🌐 www.karunaadutimes.com 🖱️🔗
✍️ ವರದಿ: ನವೀನ್ ಕುಮಾರ್
Tags:#ParappanaAgrahara #ParappanaAgraharaJail #Bengaluru #JailWarder #PrisonNews #JailNews #CrimeNews #PoliceComplaint #AttackCase #BengaluruNews #KarnatakaNews #KannadaNews #BreakingNews #LatestNews #KarunaaduTimes #ಪರಪ್ಪನಅಗ್ರಹಾರ #ಜೈಲು #ಜೈಲುವಾರ್ಡರ್ #ಹಲ್ಲೆ #ಕೊಲೆಗೆತ್ನ #ಬೆಂಗಳೂರು #ಅಪರಾಧಸುದ್ದಿ #ಕರ್ನಾಟಕಸುದ್ದಿ #ಕನ್ನಡಸುದ್ದಿ