ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಸುಮಾರು 40 ವರ್ಷದ ಮುರುಳಿಕೃಷ್ಣ ಎಂದು ಗುರುತಿಸಲಾಗಿದೆ.
ಸ್ಥಳೀಯ ಹೋಂಸ್ಟೇಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಮುರುಳಿಕೃಷ್ಣ ಅವರು ಶನಿವಾರ ಸಂಜೆ ವಾಯುವಿಹಾರಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ನಾಯಿಯೊಂದನ್ನು ಅಟ್ಟಿಸಿಕೊಂಡು ಬಂದ ಕಾಡಾನೆ ಏಕಾಏಕಿ ಪ್ರವಾಸಿಗನ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮುರುಳಿಕೃಷ್ಣ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯಿಂದ ತೆರಾಲು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಕಾಡಾನೆ ಸಂಚಾರದ ಬಗ್ಗೆ ಭೀತಿ ಹೆಚ್ಚಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಗ್ರಾಮಕ್ಕೆ ಪ್ರವೇಶಿಸಿದ ಮಾರ್ಗ, ದಾಳಿ ನಡೆದ ಸಂದರ್ಭ ಹಾಗೂ ಆನೆಗಳ ಚಲನವಲನದ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ತೆರಾಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ವಿಶೇಷವಾಗಿ ಹೋಂಸ್ಟೇಗಳಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ಸ್ಥಳೀಯ ಆಡಳಿತ ಮತ್ತು ಅರಣ್ಯ ಇಲಾಖೆ ಸೂಕ್ತ ಮಾರ್ಗಸೂಚಿ ಹಾಗೂ ಎಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಬೇಕಿದೆ.
⚠️ ಪ್ರವಾಸಿಗರಿಗೆ ಎಚ್ಚರಿಕೆ: ಕಾಡಂಚಿನ ಪ್ರದೇಶಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಏಕಾಂಗಿಯಾಗಿ ಸಂಚರಿಸದಿರುವುದು, ವನ್ಯಜೀವಿಗಳ ಚಲನವಲನ ಕಂಡುಬಂದರೆ ಸಮೀಪಿಸದಿರುವುದು ಮತ್ತು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ನೀಡುವ ಎಚ್ಚರಿಕೆಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.
🌐 ಇನ್ನಷ್ಟು ಸ್ಥಳೀಯ ಹಾಗೂ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: www.karunaadutimes.ಕಂ