ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿ ಸುತ್ತಮುತ್ತ ಹುಲಿ ಸಂಚರಿಸುತ್ತಿದೆ ಎಂಬ ವದಂತಿ ಹಾಗೂ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎನ್ನಲಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಜನವಸತಿ ಪ್ರದೇಶಗಳಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಹುಲಿಯ ಚಲನವಲನ ಪತ್ತೆಹಚ್ಚಲು 20ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಭಾನುವಾರ ಸಂಜೆದಿಂದ ಆನೆಗೊಂದಿ ಹಾಗೂ ಬೆಟ್ಟದ ಸಾಲುಗಳ ಸಮೀಪದ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಾಹನಗಳ ಮೂಲಕ ಸಂಚರಿಸಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಒಂಟಿಯಾಗಿ ಸಂಚರಿಸದಂತೆ, ಜಾನುವಾರುಗಳನ್ನು ಮೇಯಿಸಲು ಬೆಟ್ಟದ ಪ್ರದೇಶಗಳಿಗೆ ಕರೆದೊಯ್ಯದಂತೆ ಸೂಚಿಸಲಾಗಿದೆ.
ಸಣಾಪುರ, ಕುಮಾರರಾಮನ ಬೆಟ್ಟ, ತೆಂಬಾ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಸುರಕ್ಷತೆಗಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸಲಾಗಿದೆ.
ಅರಣ್ಯ ಇಲಾಖೆ ಸೂಚನೆಗಳು
ಒಬ್ಬಂಟಿಯಾಗಿ ಓಡಾಡಬಾರದು.
ರೈತರು ಹೊಲ-ಗದ್ದೆಗಳಿಗೆ ಒಬ್ಬರೇ ತೆರಳಬಾರದು.
ರಾತ್ರಿ ವೇಳೆ ಅರಣ್ಯ ಪ್ರದೇಶ ಪ್ರವೇಶಿಸಬಾರದು.
ಗುಡ್ಡಗಾಡು ಪ್ರದೇಶಗಳಿಗೆ ಅನಗತ್ಯವಾಗಿ ತೆರಳುವುದನ್ನು ತಪ್ಪಿಸಬೇಕು.
ಹಸು, ಎತ್ತು, ಮೇಕೆ ಸೇರಿದಂತೆ ಸಾಕುಪ್ರಾಣಿಗಳನ್ನು ಸುರಕ್ಷಿತ ಕೊಟ್ಟಿಗೆಯಲ್ಲಿ ಕಟ್ಟಿಹಾಕಬೇಕು.
ಕೃಷಿ ಕೆಲಸಗಳಿಗೆ ತೆರಳುವಾಗ ಗುಂಪಿನಲ್ಲಿ ತೆರಳಬೇಕು.
ಹುಲಿ ಅಥವಾ ಯಾವುದೇ ವನ್ಯಜೀವಿ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಹುಲಿಯ ಚಲನವಲನದ ಮೇಲೆ ನಿಗಾ ಇರಿಸಲು ಈಗಾಗಲೇ 20ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳಲ್ಲಿ ಹುಲಿ ಓಡಾಡಿರುವ ದೃಶ್ಯ ಸೆರೆಯಾಗಿದೆ ಎಂಬ ಮಾಹಿತಿ ಹರಿದಾಡುತ್ತಿದ್ದರೂ, ಈ ಬಗ್ಗೆ ಅರಣ್ಯ ಇಲಾಖೆ ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ.
ಇನ್ನೆರಡು ದಿನಗಳಲ್ಲಿ ಮತ್ತಷ್ಟು ಕ್ಯಾಮೆರಾ
ಹುಲಿ ಇರುವಿಕೆ ಕುರಿತು ಹರಿದಾಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ಇನ್ನೂ 15ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಈ ಕುರಿತು ಪ್ರಾದೇಶಿಕ ವಲಯ ಸಂರಕ್ಷಣಾಧಿಕಾರಿ ಬಸವರಾಜ ಪೂರಾರ ಮಾತನಾಡಿ, ಸಣಾಪುರ, ಬಸಾಪುರ, ನಾರಾಯಣಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹುಲಿ ಸಂಚರಿಸುತ್ತಿದೆ ಎಂಬ ವದಂತಿ ಹರಡಿದೆ. ಆದರೆ ಹುಲಿ ಇರುವಿಕೆ ಸದ್ಯಕ್ಕೆ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.
ಜನರಲ್ಲಿ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಕ್ಯಾಮೆರಾ ಕಣ್ಗಾವಲು ಹೆಚ್ಚಿಸಲಾಗಿದೆ. ಇದುವರೆಗೆ ಯಾವುದೇ ಪ್ರದೇಶದಲ್ಲಿ ಹುಲಿ ನೇರವಾಗಿ ಕಂಡುಬಂದಿರುವುದು ದೃಢಪಟ್ಟಿಲ್ಲ. ಇನ್ನೆರಡು ದಿನಗಳಲ್ಲಿ ಮತ್ತಷ್ಟು ಕ್ಯಾಮೆರಾಗಳನ್ನು ಅಳವಡಿಸಿ ಹುಲಿಯ ಅಸ್ತಿತ್ವದ ಬಗ್ಗೆ ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ, ಗಂಗಾವತಿ-ಆನೆಗೊಂದಿ ಭಾಗದಲ್ಲಿ ಸದ್ಯಕ್ಕೆ ‘ಹುಲಿ ಟೆನ್ಷನ್’ ಮುಂದುವರಿದಿದ್ದು, ಅರಣ್ಯ ಇಲಾಖೆ ಕ್ಯಾಮೆರಾ ಕಣ್ಗಾವಲು ಮೂಲಕ ನಿಜಾಂಶ ಪತ್ತೆಹಚ್ಚುವ ಕಾರ್ಯpದಲ್ಲಿ ತೊಡಗಿದೆ.
Tags:#ಗಂಗಾವತಿ #ಆನೆಗೊಂದಿ #ಕೊಪ್ಪಳ #ಹುಲಿ #ಹುಲಿಹೆಜ್ಜೆ #ಟೈಗರ್ಟೆನ್ಷನ್ #Tiger #Gangavathi #Anegundi #Koppal #TigerAlert #Wildlife #KarnatakaNews #ForestDepartment #BreakingNews #KarunaaDuTimes
🌐 ಇನ್ನಷ್ಟು ಸ್ಥಳೀಯ ಸುದ್ದಿಗಳಿಗಾಗಿ ಭೇಟಿ ನೀಡಿ:
🌐 www.karunaadutimes.com – ಕರುನಾಡು ಟೈಮ್ಸ್