ಹಾಸನ: ಪ್ರೀತಿಸಿ ಮದುವೆಯಾದ ಬಳಿಕ ಎದುರಾದ ಕೌಟುಂಬಿಕ ಭಿನ್ನಾಭಿಪ್ರಾಯ ಹಾಗೂ ನಿರಂತರ ಕಿರುಕುಳದ ಆರೋಪದ ನಡುವೆ ತಾಯಿ ಮತ್ತು ಎರಡು ವರ್ಷದ ಮಗು ದುರಂತ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್ನಲ್ಲಿ ನಡೆದಿದೆ.
ಮೃತರನ್ನು ಅನುಪಮಾ (27) ಹಾಗೂ ಅವರ ಎರಡು ವರ್ಷದ ಪುತ್ರ ಆರ್ಯನ್ ಎಂದು ಗುರುತಿಸಲಾಗಿದೆ. ಪತಿಯ ಕುಟುಂಬದವರಿಂದ ಕಿರುಕುಳ ನೀಡಲಾಗುತ್ತಿತ್ತು ಎಂದು ಅನುಪಮಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರೀತಿಯಿಂದ ಆರಂಭವಾದ ಸಂಬಂಧ
ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ನಿವಾಸಿಗಳಾದ ಅನುಪಮಾ ಮತ್ತು ಶ್ರೀನಿವಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಶ್ರೀನಿವಾಸ್ ಕುಟುಂಬದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಅನುಪಮಾ ಕುಟುಂಬಸ್ಥರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಇಬ್ಬರೂ ವಿವಾಹವಾಗಿದ್ದರು.
ಮದುವೆಯ ಬಳಿಕವೂ ಶ್ರೀನಿವಾಸ್ ಅವರ ತಾಯಿ ಜಯಮ್ಮ ಹಾಗೂ ಸಹೋದರಿ ಅನುಶ್ರೀ ಅವರು ದಂಪತಿಯನ್ನು ತಮ್ಮ ಮನೆಗೆ ಸೇರಿಸಿರಲಿಲ್ಲ ಎಂದು ಅನುಪಮಾ ಕುಟುಂಬ ಆರೋಪಿಸಿದೆ. ಹೀಗಾಗಿ ದಂಪತಿ ಬೆಂಗಳೂರಿಗೆ ತೆರಳಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಶ್ರೀನಿವಾಸ್ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾದ ನಾಲ್ಕು ವರ್ಷಗಳ ಬಳಿಕ ದಂಪತಿಗೆ ಗಂಡು ಮಗು ಜನಿಸಿತ್ತು.
ಕುಟುಂಬದ ವಿಚಾರಕ್ಕೆ ದಂಪತಿ ನಡುವೆ ಮನಸ್ತಾಪ
ಶ್ರೀನಿವಾಸ್ ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕುಟುಂಬದ ವಿಚಾರವಾಗಿ ಅನುಪಮಾ ತೀವ್ರವಾಗಿ ನೊಂದುಕೊಂಡಿದ್ದರು ಎಂದು ಅವರ ತಾಯಿ ಯಶೋಧ ಹಾಗೂ ಸಂಬಂಧಿಕರು ತಿಳಿಸಿದ್ದಾರೆ.
ಈ ನಡುವೆ ಹಲವು ಬಾರಿ ಕುಟುಂಬಸ್ಥರು ಮಧ್ಯಸ್ಥಿಕೆ ವಹಿಸಿ ದಂಪತಿಗೆ ತಿಳುವಳಿಕೆ ಹೇಳಿದ್ದರು. ಬಳಿಕ ಪ್ರತ್ಯೇಕವಾಗಿ ಜೀವನ ನಡೆಸಲು ನಿರ್ಧರಿಸಿದ ದಂಪತಿ ಸುಮಾರು ಎರಡು ತಿಂಗಳ ಹಿಂದೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್ನ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು.
ಅದೇ ಪ್ರದೇಶದಲ್ಲಿ ಶ್ರೀನಿವಾಸ್ ಸುಮಾರು ₹17 ಲಕ್ಷ ನೀಡಿ ಸೈಟ್ ಖರೀದಿಸಿ ಮನೆ ನಿರ್ಮಿಸಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವುದಿಲ್ಲ ಹಾಗೂ ಆಸ್ತಿ ನೀಡುವುದಿಲ್ಲ ಎಂದು ಶ್ರೀನಿವಾಸ್ ಅವರ ತಾಯಿ ಹೇಳಿದ್ದರಿಂದ ಮತ್ತೊಮ್ಮೆ ಕುಟುಂಬದಲ್ಲಿ ಮನಸ್ತಾಪ ಉಂಟಾಗಿತ್ತು ಎಂದು ಅನುಪಮಾ ಕುಟುಂಬ ಆರೋಪಿಸಿದೆ.
ಮನೆಗೆ ಬಂದ ಪತಿಗೆ ಕಾದಿತ್ತು ಆಘಾತ
ಕಳೆದ ಕೆಲವು ದಿನಗಳಿಂದ ದಂಪತಿ ನಡುವೆ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅನುಪಮಾ ಮಗುವಿನೊಂದಿಗೆ ಮನೆ ತೊರೆದಿದ್ದರು ಎನ್ನಲಾಗಿದೆ. ಬಳಿಕ ತಾಯಿ ಮನೆಗೆ ತೆರಳಿ ಎರಡು ದಿನಗಳ ಕಾಲ ಮಗುವಿನೊಂದಿಗೆ ಇದ್ದರು.
ಘಟನೆ ನಡೆದ ದಿನ ಮಧ್ಯಾಹ್ನ ಸುಮಾರು 2 ಗಂಟೆಗೆ ಪತಿಗೆ ಕರೆ ಮಾಡಿದ್ದ ಅನುಪಮಾ, ಸಂಜೆ ಬೇಗ ಮನೆಗೆ ಬರುವಂತೆ ತಿಳಿಸಿದ್ದರು ಎನ್ನಲಾಗಿದೆ.
ಶ್ರೀನಿವಾಸ್ ಸಂಜೆ ಸುಮಾರು 5 ಗಂಟೆಗೆ ಮನೆಗೆ ಬಂದಾಗ ಬಾಗಿಲು ಹಾಗೂ ಕಿಟಕಿಗಳು ಒಳಗಿನಿಂದ ಬಂದ್ ಆಗಿದ್ದವು. ಅನುಪಮಾಗೆ ಕರೆ ಮಾಡಿದಾಗ ಮನೆಯೊಳಗಿನಿಂದ ಮೊಬೈಲ್ ರಿಂಗ್ ಆಗುತ್ತಿತ್ತು. ಅನುಮಾನಗೊಂಡ ಅವರು ಅನುಪಮಾ ಸಹೋದರ ಸಂಜು ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬಾಗಿಲು ಮುರಿದು ಒಳಗೆ ಹೋದ ಪೊಲೀಸರಿಗೆ ಕಂಡದ್ದು...
ಸ್ಥಳಕ್ಕೆ ಆಗಮಿಸಿದ ಪೊಲೀಸರು ಒಳಗಿನಿಂದ ಲಾಕ್ ಆಗಿದ್ದ ಬಾಗಿಲನ್ನು ತೆರವುಗೊಳಿಸಿ ಮನೆಯೊಳಗೆ ಪ್ರವೇಶಿಸಿದಾಗ ತಾಯಿ ಮತ್ತು ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಎರಡು ವರ್ಷದ ಆರ್ಯನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಿಕ ಅನುಪಮಾ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಸಾವಿಗೆ ಕಾರಣವಾದ ನಿಖರ ಸಂಗತಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ
ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಾಯಿ-ಮಗುವಿನ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ದುಃಖದ ನಡುವೆಯೂ ಅನುಪಮಾ ಹಾಗೂ ಆರ್ಯನ್ ಅವರ ಕಣ್ಣುಗಳನ್ನು ಕುಟುಂಬಸ್ಥರು ನೇತ್ರದಾನ ಮಾಡಿದ್ದಾರೆ. ಈ ಮೂಲಕ ತಾಯಿ-ಮಗುವಿನ ಸಾವಿನಲ್ಲೂ ಮತ್ತೊಬ್ಬರ ಬದುಕಿಗೆ ಬೆಳಕಾಗುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
🏷️ Tags:#Hassan #Alur #HassanNews #AlurNews #KarnatakaNews #CrimeNews #BreakingNews #KannadaNews #FamilyDispute #LoveMarriage #MotherAndChild #EyeDonation #PoliceInvestigation #ಹಾಸನ #ಆಲೂರು #ಹಾಸನಸುದ್ದಿ #ಆಲೂರುಸುದ್ದಿ #ಕರ್ನಾಟಕಸುದ್ದಿ #ಅಪರಾಧಸುದ್ದಿ #ಕೌಟುಂಬಿಕಕಲಹ #ಪ್ರೀತಿಮದುವೆ #ನೇತ್ರದಾನ #KarunaaDuTimes