ಬೆಳಗಾವಿ: ರಾಜ್ಯವನ್ನು ಬೆಚ್ಚಿಬೀಳಿಸಿರುವ ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಇದೀಗ ಬಾಲಿವುಡ್ನ ಖ್ಯಾತ ನಟಿ ಸನ್ನಿ ಲಿಯೋನ್ ಸೇರಿದಂತೆ ಹಲವು ಸಿನಿಮಾ ತಾರೆಯರಿಗೆ ಕರ್ನಾಟಕ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್, ಹೂಡಿಕೆದಾರರ ಹಣದ ಒಂದು ಭಾಗವನ್ನು ಚಿತ್ರರಂಗದ ಕೆಲವು ನಟ-ನಟಿಯರ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ, “ಶಿವಾನಂದ ನೀಲಣ್ಣವರ ವಂಚನೆ ಮೂಲಕ ಸಂಗ್ರಹಿಸಿದ ಹಣವನ್ನು ಕೆಲವು ಸಿನಿಮಾ ನಟಿಯರಿಗೆ ಮತ್ತು ಇತರ ಸೆಲೆಬ್ರಿಟಿಗಳಿಗೆ ವರ್ಗಾವಣೆ ಮಾಡಿರುವ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ಸೇರಿದಂತೆ ಹಣ ಪಡೆದಿರುವವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ” ಎಂದು ಹೇಳಿದರು.
2,400 ಕೋಟಿ ರೂಪಾಯಿ ವಂಚನೆ ಆರೋಪ!
ಪ್ರಾಥಮಿಕ ತನಿಖೆಯ ಪ್ರಕಾರ, ಶಿವಾನಂದ ನೀಲಣ್ಣನವರ್ ಸುಮಾರು 40,700 ಹೂಡಿಕೆದಾರರಿಂದ 2,400 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾನೆ ಎನ್ನಲಾಗಿದೆ. ಇದರಲ್ಲಿ ಸುಮಾರು 10,000 ಹೂಡಿಕೆದಾರರು ಮಹಾರಾಷ್ಟ್ರ ರಾಜ್ಯದವರೇ ಆಗಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂಪಾಯಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಸುಮಾರು 170 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
30 ಬ್ಯಾಂಕ್ ಖಾತೆಗಳ ಜಾಲ!
ಈ ಭಾರಿ ವಂಚನೆ ಜಾಲವನ್ನು ನಡೆಸಲು ಆರೋಪಿ ಸುಮಾರು 30 ಬ್ಯಾಂಕ್ ಖಾತೆಗಳನ್ನು ಬಳಸಿದ್ದಾನೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಒಂದು ಬ್ಯಾಂಕ್ ಖಾತೆಯಲ್ಲಿಯೇ 36,200 ಪುಟಗಳಷ್ಟು ವಹಿವಾಟು ದಾಖಲೆಗಳು ಪತ್ತೆಯಾಗಿರುವುದು ತನಿಖಾಧಿಕಾರಿಗಳನ್ನು ಅಚ್ಚರಿಗೊಳಿಸಿದೆ.
ಸೆಲೆಬ್ರಿಟಿಗಳ ಪಾತ್ರದ ಕುರಿತು ತನಿಖೆ
ಸಿಐಡಿ ಅಧಿಕಾರಿಗಳು ಹಣ ವರ್ಗಾವಣೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದು, ಹಣ ಪಡೆದ ನಟ-ನಟಿಯರು ಈ ವ್ಯವಹಾರಗಳ ಬಗ್ಗೆ ತಿಳಿದಿದ್ದರೇ ಅಥವಾ ಕೇವಲ ವಾಣಿಜ್ಯ ಒಪ್ಪಂದದ ಭಾಗವಾಗಿ ಹಣ ಸ್ವೀಕರಿಸಿದ್ದರೇ ಎಂಬುದರ ಕುರಿತೂ ತನಿಖೆ ನಡೆಸಲಾಗುತ್ತಿದೆ.
ಪ್ರಕರಣಕ್ಕೆ ಹೊಸ ತಿರುವು
ಸಾವಿರಾರು ಹೂಡಿಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಈ ಬಹುಕೋಟಿ ಹಗರಣದಲ್ಲಿ ಇದೀಗ ಸಿನಿಮಾ ತಾರೆಯರ ಹೆಸರುಗಳು ಕೇಳಿಬರುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮತ್ತು ಗಂಭೀರತೆಯನ್ನು ತಂದಿದೆ. ಸನ್ನಿ ಲಿಯೋನ್ ಸೇರಿದಂತೆ ನೋಟಿಸ್ ಪಡೆದವರ ವಿಚಾರಣೆಯ ನಂತರ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.