ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸೇನಾ ದಾಳಿಗಳಿಂದ ಅಪಾರ ಪ್ರಮಾಣದ ನಾಗರಿಕರು ಸಾವನ್ನಪ್ಪುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ ಎಂದು ಭಾರತ ಆರೋಪಿಸಿದೆ. ಈ ಕ್ರಮಗಳು ಅಫ್ಘಾನಿಸ್ತಾನದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದರ ಜೊತೆಗೆ, ಇಡೀ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಅಪಾಯವನ್ನುಂಟು ಮಾಡುತ್ತಿವೆ ಎಂದು ಹೇಳಿದೆ.
ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿಗಳು, ನಿರಪರಾಧ ನಾಗರಿಕರ ಸಾವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮಕ್ಕಳು ಅನಾಥರಾಗುವುದು, ಕುಟುಂಬಗಳು ದುಃಖದಲ್ಲಿ ಮುಳುಗುವುದು ಮತ್ತು ಸಾಮಾನ್ಯ ಜನರು ಬಲಿಯಾಗುವುದು ಭಯೋತ್ಪಾದನೆ ವಿರುದ್ಧದ ಹೋರಾಟದ ಭಾಗವಾಗಲಾರದು ಎಂದು ಕಿಡಿಕಾರಿದರು.
ಈ ವರ್ಷದ ಮೊದಲ ಮೂರು ತಿಂಗಳಲ್ಲಿ ನೂರಾರು ನಾಗರಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದನ್ನು ಉಲ್ಲೇಖಿಸಿದ ಭಾರತ, ವಿಶೇಷವಾಗಿ ರಂಜಾನ್ ತಿಂಗಳ ಅವಧಿಯಲ್ಲಿ ನಡೆದ ದಾಳಿಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿತು.
ಇದೇ ವೇಳೆ, ತನ್ನ ಆಂತರಿಕ ವೈಫಲ್ಯಗಳಿಂದ ಗಮನ ಬೇರೆಡೆ ಸೆಳೆಯಲು ಪಾಕಿಸ್ತಾನ ನಿರಂತರವಾಗಿ ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸುತ್ತಿದೆ ಎಂದು ಭಾರತ ಆರೋಪಿಸಿತು. ಧಾರ್ಮಿಕ ಪದಗಳನ್ನು ಬಳಸಿ ತಪ್ಪು ಮಾಹಿತಿ ಹರಡುವುದು ಹಾಗೂ ಭಾರತ ವಿರೋಧಿ ಭಾವನೆಗಳನ್ನು ಉತ್ತೇಜಿಸುವ ಪ್ರಯತ್ನಗಳು ಜಗತ್ತಿನ ಮುಂದೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ತಿಳಿಸಿತು.
ಅಫ್ಘಾನಿಸ್ತಾನದ ವ್ಯಾಪಾರ ಮತ್ತು ಸಾರಿಗೆ ಹಕ್ಕುಗಳಿಗೆ ಅಡ್ಡಿಯಾಗುತ್ತಿರುವ ವಿಚಾರವನ್ನೂ ಭಾರತ ಪ್ರಸ್ತಾಪಿಸಿತು. ಭೂಆವರಿತ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ಸೌಲಭ್ಯಗಳನ್ನು ಒದಗಿಸಬೇಕೆಂಬ ಬದ್ಧತೆಯನ್ನು ಪಾಕಿಸ್ತಾನ ಪಾಲಿಸುತ್ತಿಲ್ಲ ಎಂದು ಟೀಕಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ, ಕೆಲವು ಅಂತರರಾಷ್ಟ್ರೀಯ ವರದಿಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದರೂ, ಭಾರತ ತನ್ನ ನಿಲುವನ್ನು ಮತ್ತೊಮ್ಮೆ ದೃಢಪಡಿಸಿತು. ವಿಶ್ವಸಂಸ್ಥೆಯ ತತ್ವಗಳನ್ನು ಎಲ್ಲ ದೇಶಗಳು ಸಮಾನವಾಗಿ ಗೌರವಿಸಬೇಕು ಮತ್ತು ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿತು.