ಮಿಜೋರಾಂ ರಾಜ್ಯದ ಒಂದು ಪುಟ್ಟ ಹಳ್ಳಿ ಇಂದು ಜಗತ್ತಿನ ಗಮನ ಸೆಳೆದಿದೆ. ಕಾರಣ ಅಲ್ಲಿನ ಪ್ರಕೃತಿ ಸೌಂದರ್ಯ ಮಾತ್ರವಲ್ಲ, ವಿಶ್ವದ ಅತಿದೊಡ್ಡ ಕುಟುಂಬವೆಂದು ಗುರುತಿಸಿಕೊಂಡಿರುವ ಜಿಯೋನಾ ಚಾನಾ ಅವರ ಕುಟುಂಬ.
ಮಿಜೋರಾಂನ ಬಕ್ತಾಂಗ್ ಗ್ರಾಮದಲ್ಲಿ ನೆಲೆಸಿರುವ ಈ ಕುಟುಂಬ ಹಲವು ವರ್ಷಗಳಿಂದ ಪ್ರವಾಸಿಗರ ಕುತೂಹಲದ ಕೇಂದ್ರಬಿಂದುವಾಗಿದೆ. ಕುಟುಂಬದ ಮುಖ್ಯಸ್ಥರಾಗಿದ್ದ ಜಿಯೋನಾ ಚಾನಾ ಅವರು 2021ರಲ್ಲಿ ನಿಧನರಾದರೂ, ಅವರ ಕುಟುಂಬದ ವಿಶಿಷ್ಟ ಜೀವನಶೈಲಿ ಇಂದಿಗೂ ಜನರನ್ನು ಆಕರ್ಷಿಸುತ್ತಿದೆ.
ಜಿಯೋನಾ ಚಾನಾ ಅವರು ತಮ್ಮ ಜೀವನದಲ್ಲಿ ಒಟ್ಟು 39 ವಿವಾಹಗಳನ್ನು ಮಾಡಿಕೊಂಡಿದ್ದರು. ಅವರ 39 ಪತ್ನಿಯರಿಂದ 94 ಮಕ್ಕಳು ಜನಿಸಿದ್ದು, ಮಕ್ಕಳಲ್ಲಿ ಹಲವರು ವಿವಾಹವಾಗಿದ್ದಾರೆ. ಸೊಸೆಯರು, ಮೊಮ್ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರ ಸಂಖ್ಯೆ 200ಕ್ಕೂ ಅಧಿಕವಾಗಿದೆ.
ಈ ಬೃಹತ್ ಕುಟುಂಬ ವಾಸಿಸುವ ಮನೆ ಕೂಡ ಅಷ್ಟೇ ವಿಶೇಷ. ‘ಚುವಾನ್ ಥರ್ ರನ್’ ಎಂದು ಕರೆಯಲ್ಪಡುವ ನಾಲ್ಕು ಮಹಡಿಯ ಮನೆಯಲ್ಲಿ ಸುಮಾರು 100 ಕೊಠಡಿಗಳಿವೆ. ಒಂದೇ ಸೂರಿನಡಿ ಇಷ್ಟು ದೊಡ್ಡ ಕುಟುಂಬ ವಾಸಿಸುವುದು ಜಗತ್ತಿನಲ್ಲೇ ಅಪರೂಪದ ಸಂಗತಿಯಾಗಿದೆ.
ದೈನಂದಿನ ಜೀವನವೂ ಸವಾಲಿನದ್ದೇ. ಪ್ರತಿದಿನ ಕುಟುಂಬದ ಆಹಾರಕ್ಕಾಗಿ 45ರಿಂದ 90 ಕೆಜಿ ಅಕ್ಕಿ, 40 ಕೆಜಿ ಆಲೂಗಡ್ಡೆ, 25 ಕೆಜಿ ತರಕಾರಿ ಹಾಗೂ 20 ಕೆಜಿ ಬೇಳೆ ಬಳಸಲಾಗುತ್ತದೆ. ಮಾಂಸದ ಊಟದ ದಿನಗಳಲ್ಲಿ ಒಂದೇ ಹೊತ್ತಿಗೆ 30ಕ್ಕೂ ಹೆಚ್ಚು ಕೋಳಿಗಳು ಬೇಕಾಗುತ್ತವೆ ಎನ್ನಲಾಗುತ್ತದೆ.
ಇಷ್ಟೊಂದು ದೊಡ್ಡ ಕುಟುಂಬದ ನಿರ್ವಹಣೆಗೆ ಸದಸ್ಯರೆಲ್ಲರೂ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ. ಅಡುಗೆ, ಸ್ವಚ್ಛತೆ, ಕೃಷಿ ಹಾಗೂ ಇತರ ಕೆಲಸಗಳನ್ನು ಪಾಳಿಯ ಆಧಾರದ ಮೇಲೆ ನಿರ್ವಹಿಸಲಾಗುತ್ತದೆ. ಕುಟುಂಬದ ಹಿರಿಯ ಮಹಿಳೆಯರು ಮನೆ ನಿರ್ವಹಣೆಯ ಪ್ರಮುಖ ಹೊಣೆ ಹೊತ್ತಿದ್ದಾರೆ.
ಜಿಯೋನಾ ಚಾನಾ ಕುಟುಂಬವು ‘ಲಾಲ್ಪಾ ಕೊಹ್ರಾನ್ ಥಾರ್’ ಎಂಬ ಧಾರ್ಮಿಕ ಪಂಥಕ್ಕೆ ಸೇರಿದ್ದು, ಕೃಷಿ ಮತ್ತು ಪಶುಸಂಗೋಪನೆಯನ್ನು ಪ್ರಮುಖ ಜೀವನಾಧಾರವನ್ನಾಗಿಸಿಕೊಂಡಿದೆ. ವಿಶಿಷ್ಟ ಕುಟುಂಬ ವ್ಯವಸ್ಥೆ ಹಾಗೂ ಒಗ್ಗಟ್ಟಿನ ಬದುಕಿನ ಕಾರಣದಿಂದ ಈ ಮನೆ ಇಂದು ದೇಶ-ವಿದೇಶದ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಗುರುತಿಸಿಕೊಂಡಿದೆ.
ಒಂದೆಡೆ ಸಣ್ಣ ಕುಟುಂಬಗಳೇ ನಿರ್ವಹಿಸಲು ಕಷ್ಟವಾಗುತ್ತಿರುವ ಈ ಕಾಲದಲ್ಲಿ, 200ಕ್ಕೂ ಹೆಚ್ಚು ಸದಸ್ಯರು ಒಂದೇ ಮನೆಯಡಿ ಒಗ್ಗಟ್ಟಿನಿಂದ ಬದುಕುತ್ತಿರುವ ಜಿಯೋನಾ ಚಾನಾ ಕುಟುಂಬ ನಿಜಕ್ಕೂ ಅಚ್ಚರಿ ಮೂಡಿಸುವ ಉದಾಹರಣೆಯಾಗಿದೆ.