ನವದೆಹಲಿ: ಫಿಲಿಪೈನ್ಸ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಸರಣಿ ಭೂಕಂಪಗಳು ಜನರಲ್ಲಿ ಭಾರೀ ಆತಂಕ ಸೃಷ್ಟಿಸಿವೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಮೊದಲ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.7 ದಾಖಲಾಗಿದೆ.
ಫಿಲಿಪೈನ್ಸ್ನ ಮಿಂಡಾನಾವೊ ದ್ವೀಪದ ಸಮೀಪ ಮೊದಲ ಭೂಕಂಪ ಬೆಳಿಗ್ಗೆ 5:07ಕ್ಕೆ ಸಂಭವಿಸಿತು. ಬಳಿಕ 5:18ಕ್ಕೆ 6.4 ತೀವ್ರತೆಯ ಮತ್ತೊಂದು ಕಂಪನ ದಾಖಲಾಗಿದ್ದು, ಬೆಳಿಗ್ಗೆ 6:25ಕ್ಕೆ ಮೂರನೇ ಬಾರಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪದ ತೀವ್ರತೆಗೆ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದು, ಕೆಲ ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಾವು-ನೋವಿನ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಭಾರೀ ಭೂಕಂಪದ ಬೆನ್ನಲ್ಲೇ ಫಿಲಿಪೈನ್ಸ್, ಇಂಡೋನೇಷ್ಯಾ ಹಾಗೂ ಜಪಾನ್ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜಪಾನ್ ಹವಾಮಾನ ಇಲಾಖೆ ಕೆಲವು ಕರಾವಳಿ ಭಾಗಗಳಲ್ಲಿ ಒಂದು ಮೀಟರ್ವರೆಗೆ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಅಮೆರಿಕದ ಸುನಾಮಿ ಎಚ್ಚರಿಕೆ ಕೇಂದ್ರವೂ ಅಪಾಯಕಾರಿ ಅಲೆಗಳ ಸಾಧ್ಯತೆಯನ್ನು ಉಲ್ಲೇಖಿಸಿ ಕರಾವಳಿ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಇಂಡೋನೇಷ್ಯಾ ಭೂಭೌತ ಸಂಸ್ಥೆಯು ತನ್ನ ಈಶಾನ್ಯ ಕರಾವಳಿ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.
ಸರಣಿ ಭೂಕಂಪಗಳಿಂದ ಪೆಸಿಫಿಕ್ ವಲಯದ ಹಲವು ರಾಷ್ಟ್ರಗಳು ಹೈ ಅಲರ್ಟ್ ಘೋಷಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.