ಕೋಲಾರ: ಮಕ್ಕಳಿಗೆ ಈಜು ಕಲಿಸುವ ಉದ್ದೇಶದಿಂದ ಕೃಷಿ ಹೊಂಡಕ್ಕೆ ತೆರಳಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶ್ರೀನಿವಾಸ್ (40) ಹಾಗೂ ಅವರ ಪುತ್ರರಾದ ಚೇತನ್ (13) ಮತ್ತು ರಾಜೇಶ್ (8) ಎಂದು ಗುರುತಿಸಲಾಗಿದೆ.
ಭೈರಪ್ಪ ಅವರಿಗೆ ಸೇರಿದ ಕೃಷಿ ಹೊಂಡದ ಬಳಿ ಮಕ್ಕಳಿಗೆ ಈಜು ಕಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೂವರೂ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಆಳವಾದ ನೀರಿನಿಂದ ಹೊರಬರಲು ಸಾಧ್ಯವಾಗದೇ ಮೂವರೂ ಜಲಸಮಾಧಿಯಾಗಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.