ಮಡಿಕೇರಿ:ಸ್ನೇಹಿತರೊಂದಿಗೆ ಕೊಡಗಿನ ಸುಂದರ ಪ್ರವಾಸವನ್ನು ಆನಂದಿಸಲು ಬಂದಿದ್ದ ಮೈಸೂರಿನ ಯುವತಿಯೊಬ್ಬರು ಹೋಂಸ್ಟೇಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಮೃತಳನ್ನು ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆ ನಿವಾಸಿಗಳಾದ ಜಗನ್ನಾಥ ಹಾಗೂ ರೇಣುಕಾ ದಂಪತಿಯ ಪುತ್ರಿ 27 ವರ್ಷದ ವಿನುತಾ ಎಂದು ಗುರುತಿಸಲಾಗಿದೆ.
ವಿನುತಾ ಸೇರಿದಂತೆ 14 ಮಂದಿ ಸ್ನೇಹಿತರ ತಂಡವು ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿತ್ತು. ಬೆಳಗಿನ ವೇಳೆ ಸ್ನಾನಕ್ಕೆ ತೆರಳಿದ್ದ ವಿನುತಾ ಬಹಳ ಸಮಯವಾದರೂ ಹೊರಬಾರದ ಹಿನ್ನೆಲೆಯಲ್ಲಿ ಸ್ನೇಹಿತರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾತ್ರೂಮ್ನೊಳಗೆ ಅವರು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಾತ್ರೂಮ್ನಲ್ಲಿದ್ದ ಗ್ಯಾಸ್ ಗೀಸರ್ನಿಂದ ವಿಷಕಾರಿ ಅನಿಲ ಸೋರಿಕೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಬಕೆಟ್ ಒಳಗೆ ತಲೆ ಮುಳುಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಪ್ರಕರಣದ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ತಾಂತ್ರಿಕ ತಜ್ಞರು ಪರಿಶೀಲನೆ ನಡೆಸಿದ್ದು, ಮರಣದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ಹಿಂದಿನ ನಿಜಾಂಶ ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.