ಪ್ರಿಯಕರನ ಜೊತೆ ಸೇರಿ ಸ್ವಂತ ಮಗಳನ್ನೇ ಕೊಂದಳಾ ತಾಯಿ? 3 ತಿಂಗಳ ಬಳಿಕ ಪೋಸ್ಟ್ಮಾರ್ಟಂ ವರದಿಯಿಂದ ಬಯಲಾಯಿತೇ ಭೀಕರ ಸತ್ಯ!
ಬೆಂಗಳೂರು: ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ವಿಲ್ಲಾದಲ್ಲಿ ನಡೆದ 6 ವರ್ಷದ ಬಾಲಕಿ ವೆನ್ನಿಲಾ ಸಾವಿನ ಪ್ರಕರಣ ಇದೀಗ ಭಾರೀ ಸಂಚಲನ ಮೂಡಿಸಿದೆ. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಮೂರು ತಿಂಗಳ ಬಳಿಕ ಹೊಸ ತಿರುವು ಸಿಕ್ಕಿದ್ದು, ಬಾಲಕಿಯ ತಾಯಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಮೃತ ಬಾಲಕಿಯ ತಂದೆ ಪ್ರವೀಣ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ತಾಯಿ ಪ್ರಿಯಾಂಕ ಹಾಗೂ ಆಕೆಯ ಆಪ್ತ ಸ್ನೇಹಿತ ಮೋಹನ್ ವಿರುದ್ಧ ಅನುಮಾನ ವ್ಯಕ್ತವಾಗಿದ್ದು, ಮೋಹನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಯಿ ಪ್ರಿಯಾಂಕ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸಂತೋಷದ ಸಂಸಾರದಲ್ಲಿ ಹಳೆಯ ಸ್ನೇಹಿತನ ಎಂಟ್ರಿ
ದಾವಣಗೆರೆ ಮೂಲದ ಪ್ರವೀಣ್ ಹಾಗೂ ಬೆಂಗಳೂರಿನ ಪ್ರಿಯಾಂಕ 2007ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಪ್ರಿಯಾಂಕ ತನ್ನ ಕಾಲೇಜು ದಿನಗಳ ಸ್ನೇಹಿತ ಮೋಹನ್ ಜೊತೆ ಮತ್ತೆ ಸಂಪರ್ಕದಲ್ಲಿದ್ದಳು ಎನ್ನುವ ಆರೋಪ ಕೇಳಿಬಂದಿದೆ.
ಈ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಪ್ರಿಯಾಂಕ ವಿಚ್ಛೇದನಕ್ಕೆ ಒತ್ತಾಯಿಸುತ್ತಿದ್ದಳು ಎಂದು ಪ್ರವೀಣ್ ಆರೋಪಿಸಿದ್ದಾರೆ. ಬಳಿಕ ಪ್ರಿಯಾಂಕ ಕಾಡುಗೋಡಿಯಲ್ಲಿ ಮೋಹನ್ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಕಿರಿಯ ಮಗಳು ವೆನ್ನಿಲಾ ಕೂಡ ತಾಯಿಯ ಜೊತೆಯಲ್ಲೇ ಇದ್ದಳು ಎಂದು ತಿಳಿದುಬಂದಿದೆ.
ಮಗುವಿನ ಸಾವಿನ ಬಗ್ಗೆ ಅನುಮಾನ ಹುಟ್ಟಿಸಿದ ತಾಯಿಯ ಹೇಳಿಕೆ
ಮಾರ್ಚ್ 24ರಂದು ವೆನ್ನಿಲಾ ಅಕಸ್ಮಿಕವಾಗಿ ಮೃತಪಟ್ಟಿದ್ದಳು. ಮಗಳ ಸಾವಿನ ಬಗ್ಗೆ ಕೇಳಿದಾಗ ಪ್ರಿಯಾಂಕ ನೀಡಿದ ಮಾಹಿತಿ ತಂದೆಯ ಅನುಮಾನಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.
ಒಮ್ಮೆ ಮಗುವಿಗೆ ಬಿರಿಯಾನಿ ತಿನ್ನಿಸಿದ್ದೆ, ಮತ್ತೊಮ್ಮೆ ಐಸ್ಕ್ರೀಂ ಕೊಟ್ಟಿದ್ದೆ. ಬಳಿಕ ಕಾರಿನಲ್ಲಿ ಎಸಿ ಹಾಕಿ ಮಲಗಿಸಿದ್ದೆ. ರಾತ್ರಿ ಮನೆಗೆ ಬಂದ ನಂತರ ಬೆಳಿಗ್ಗೆ ನೋಡಿದಾಗ ಮಗು ಮೃತಪಟ್ಟಿತ್ತು ಎಂದು ಪ್ರಿಯಾಂಕ ಹೇಳಿದ್ದಾಳೆ ಎಂದು ಪ್ರವೀಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೋಸ್ಟ್ಮಾರ್ಟಂ ವರದಿಯಿಂದ ತಿರುವು
ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಏಪ್ರಿಲ್ 4ರಂದು ಕುಟುಂಬದ ಕೈ ಸೇರಿದೆ. ವರದಿಯನ್ನು ವಿದೇಶದಲ್ಲಿರುವ ವೈದ್ಯೆಯೊಬ್ಬ ಸಂಬಂಧಿಗೆ ಕಳುಹಿಸಿ ಪರಿಶೀಲಿಸಿದಾಗ, ಇದು ಸಹಜ ಸಾವಿನಂತೆ ಕಾಣುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.
ಈ ಮಾಹಿತಿಯಿಂದ ಅನುಮಾನಗೊಂಡ ಪ್ರವೀಣ್, ಮಗುವಿನ ಸಾವಿನ ಹಿಂದೆ ದುಷ್ಕೃತ್ಯ ಇರಬಹುದೆಂಬ ಶಂಕೆಯಿಂದ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಸಿರುಗಟ್ಟಿಸಿ ಕೊಲೆ ಮಾಡಿದ ಶಂಕೆ
ಪೋಸ್ಟ್ಮಾರ್ಟಂ ವರದಿಯಲ್ಲಿನ ಕೆಲವು ಅಂಶಗಳ ಆಧಾರದ ಮೇಲೆ ಬಾಲಕಿಯ ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತಾಯಿ ಪ್ರಿಯಾಂಕ ಹಾಗೂ ಮೋಹನ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿರುವ ಪೊಲೀಸರು
ಮಗುಮೃತಪಟ್ಟಿದ್ದು ಮೂರು ತಿಂಗಳು ಕಳೆದ ಬಳಿಕ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರಸ್ತುತ ಎಫ್ಎಸ್ಎಲ್ (Forensic Science Laboratory) ವರದಿ ನಿರೀಕ್ಷೆಯಲ್ಲಿದ್ದು, ಅದು ಬಂದ ನಂತರ ಸಾವಿನ ನಿಖರ ಕಾರಣ ಹಾಗೂ ಪ್ರಕರಣದ ಸಂಪೂರ್ಣ ಸತ್ಯ ಹೊರಬೀಳುವ ಸಾಧ್ಯತೆ ಇದೆ.
ಪೊಲೀಸರ ತನಿಖೆ ಮುಂದುವರಿದಿದ್ದು, ಎಫ್ಎಸ್ಎಲ್ ವರದಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.