ಚಿಕ್ಕಮಂಗಳೂರು : ಶಿಕ್ಷಣದ ದೇಗುಲವಾಗಿರುವ ಶಾಲೆಯೊಂದು ಇಂದು ಮಕ್ಕಳ ನಗು-ಕಲರವವಿಲ್ಲದೆ ಮೌನವಾಗಿದೆ. ಕಾರಣ, ಹುಲಿ ಮತ್ತು ಚಿರತೆಯ ಭೀತಿ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಸಮೀಪದ ಬೈರಾಪುರ ಗ್ರಾಮದಲ್ಲಿ ವನ್ಯಜೀವಿಗಳ ಓಡಾಟ ಮಕ್ಕಳ ಶಿಕ್ಷಣದ ಮೇಲೆಯೇ ಗಂಭೀರ ಪರಿಣಾಮ ಬೀರಿದೆ.
ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಈ ಗ್ರಾಮದ ಮಕ್ಕಳು ಪ್ರತಿದಿನ ದಟ್ಟ ಅರಣ್ಯದ ಮಾರ್ಗದಲ್ಲಿ ಶಾಲೆಗೆ ತೆರಳಬೇಕಾಗಿದೆ. ಕಳೆದ ಎರಡು ದಿನಗಳಲ್ಲಿ ಚಿರತೆ ಹಾಗೂ ಹುಲಿ ಕಾಣಿಸಿಕೊಂಡಿರುವ ಘಟನೆಗಳು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ಮಕ್ಕಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ ಪೋಷಕರು ಅವರನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದು, ಪರಿಣಾಮವಾಗಿ 41 ವಿದ್ಯಾರ್ಥಿಗಳು ಎರಡು ದಿನಗಳಿಂದ ತರಗತಿಗಳಿಗೆ ಗೈರಾಗಿದ್ದಾರೆ. ಶಿಕ್ಷಕರು ಶಾಲೆಗೆ ಆಗಮಿಸಿ ಮಕ್ಕಳಿಗಾಗಿ ಕಾಯುತ್ತಿದ್ದರೂ, ಮಕ್ಕಳಿಲ್ಲದ ತರಗತಿ ಕೊಠಡಿಗಳು ಬಿಕೋ ಎನ್ನುತ್ತಿವೆ.
ಇತ್ತ ಗ್ರಾಮಸ್ಥರು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರದ ಮುಂದೆ ಆಗ್ರಹಿಸಿದ್ದಾರೆ. ಶಾಲೆಗೆ ತೆರಳಲು ಸುರಕ್ಷಿತ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕು, ಜೊತೆಗೆ ಅರಣ್ಯದ ಗಡಿಭಾಗದಲ್ಲಿ ಕಂದಕ ಅಥವಾ ರಕ್ಷಣಾ ಬೇಲಿ ನಿರ್ಮಿಸಿ ವನ್ಯಜೀವಿಗಳ ಗ್ರಾಮ ಪ್ರವೇಶಕ್ಕೆ ತಡೆ ಹಾಕಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಶಿಕ್ಷಣ ಇಲಾಖೆ, ತಹಸೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಟ್ಟು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ, ಕಾಡಿನ ಅಂಚಿನಲ್ಲಿ ಬದುಕುತ್ತಿರುವ ಗ್ರಾಮಸ್ಥರಿಗೆ ವನ್ಯಜೀವಿಗಳ ಭೀತಿ ಹೊಸದಲ್ಲ. ಆದರೆ ಈ ಬಾರಿ ಮಕ್ಕಳ ಶಿಕ್ಷಣವೇ ಅಡಚಣೆಗೆ ಸಿಲುಕಿರುವುದು ಕಳವಳಕ್ಕೆ ಕಾರಣವಾಗಿದೆ. ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸುವುದು ಈಗ ಅಧಿಕಾರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.