ಬೀದರ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಾವಿನ ಹಣ್ಣು ಸೇವಿಸಿದ ಬಳಿಕ ಆರೋಗ್ಯದಲ್ಲಿ ಏರುಪೇರಾದ ಒಂದೇ ಕುಟುಂಬದ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ 17 ವರ್ಷದ ಭವಾನಿ ವೈಜಿನಾಥ ಮೇತ್ರೆ ಹಾಗೂ 14 ವರ್ಷದ ಸಂಧ್ಯಾರಾಣಿ ಮೇತ್ರೆ ಮೃತಪಟ್ಟ ಸಹೋದರಿಯರಾಗಿದ್ದಾರೆ. ಕುಟುಂಬದ ಸದಸ್ಯರು ಮನೆಯಲ್ಲಿ ಊಟ ಮಾಡಿದ ಬಳಿಕ ಮಾವಿನ ಹಣ್ಣು ಸೇವಿಸಿದ್ದು, ನಂತರ ಕೆಲವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಅಸ್ವಸ್ಥಗೊಂಡ ತಾಯಿ ಹಾಗೂ ಪುತ್ರಿಯರನ್ನು ತಕ್ಷಣ ಚಿಕಿತ್ಸೆಗಾಗಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಭವಾನಿ ಮತ್ತು ಸಂಧ್ಯಾರಾಣಿ ಕೊನೆಯುಸಿರೆಳೆದಿದ್ದಾರೆ. ಇನ್ನೊಬ್ಬ ಸಹೋದರಿ ವಿಜಯಶ್ರೀ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಾವಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಮಾವಿನ ಹಣ್ಣು ಸೇವನೆಯಿಂದಲೇ ಈ ಘಟನೆ ಸಂಭವಿಸಿದೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ವೈದ್ಯಕೀಯ ವರದಿಗಳ ಬಳಿಕವೇ ಸ್ಪಷ್ಟವಾಗಲಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸತ್ಯಾಂಶ ಏನು ಎಂಬುದು ತನಿಖೆಯ ನಂತರವೇ ಹೊರಬರಬೇಕಿದೆ.