ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್, ನೃತ್ಯಗಾರ್ತಿ ಜೊತೆಗೆ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಭಜನೆ, ಕರ್ನಾಟಕ ಸಂಗೀತದಲ್ಲಿ ಇವರ ಸಾಧನೆಗೆ ಸಂಗೀತ ವಿಭಾಗದಲ್ಲಿ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರನ್ನು ಸಂಗೀತ ನಾಟಕ ಅಕಾಡೆಮಿಯ 2025ನೇ ಸಾಲಿನ 'ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಪುರಸ್ಕಾರ'ಕ್ಕೆ ಆಯ್ಕೆ ಮಾಡಲಾಗಿದೆ. 2024 ಮತ್ತು 25 ನೇ ಸಾಲಿಗೆ ಒಟ್ಟು 106 ಕಲಾವಿದರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲೆಯಲ್ಲಿ ಸೇವೆ ಸಲ್ಲಿಸುವ ಯುವ ಕಲಾವಿದರಿಗೆ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾಖಾನ್ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ. ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಶಿವಶ್ರೀ ಅವರು, ''ದೇವರಿಗೆ ಹಾಗೂ ನನ್ನ ಗುರುಗಳಿಗೆ ಈ ಗೌರವವನ್ನು ಸಮರ್ಪಿಸುತ್ತೇನೆ,'' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಶಿವಶ್ರೀಯವರು ತೇಜಸ್ವಿಸೂರ್ಯ ಅವರನ್ನು ಮದುವೆಯಾದ ಬಳಿಕ ಕೆಲವೇ ತಿಂಗಳಲ್ಲಿ ಕನ್ನಡ ಕಲಿತು, ಕನ್ನಡದ ಅವರ ಸಂಗೀತ ಕಚೇರಿಗಳೂ ಸಾಕಷ್ಟು ಹೆಸರುವಾಸಿಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಭಜನೆ ಹಾಗೂ ಭಕ್ತಿಗೀತೆಗಳಬ್ನು ಭಾವಪೂರ್ಣವಾಗಿ ಹಾಡುತ್ತಾರೆ. ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಈ ಸಾಧನೆಗೆ ಸಂಗೀತ ವಿಭಾಗದಲ್ಲಿ ಈಗ ಪುರಸ್ಕಾರ ಬಂದಿದೆ.