ಕಲಬುರ್ಗಿ: ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದಾಗ ಅದು ಕೇವಲ ಅವರ ಸಾಧನೆ ಮಾತ್ರವಲ್ಲ, ಶಿಕ್ಷಕರ ಪರಿಶ್ರಮಕ್ಕೂ ಸಿಗುವ ಗೌರವ. ಈ ಮಾತಿಗೆ ಸಾಕ್ಷಿಯಾಗುವಂತಹ ಹೃದಯಸ್ಪರ್ಶಿ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಓದಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯಲ್ಲಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನಯಾನದ ಅವಕಾಶ ಕಲ್ಪಿಸಿ ಮಾದರಿಯಾಗಿದ್ದಾರೆ.
ಕಲಬುರ್ಗಿಯ ಶ್ರೀ ಹಿಂಗುಲಾಂಬಿಕಾ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಈ ಅಪರೂಪದ ಅವಕಾಶ ದೊರೆತಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಕರು ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ದು ಅವರ ಕನಸಿಗೆ ರೆಕ್ಕೆ ಕಟ್ಟಿದ್ದಾರೆ.
ಓದಿನ ಸಾಧನೆಗೆ ಆಕಾಶದಷ್ಟು ಬಹುಮಾನ
ಶಾಲೆಯ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಪೈಕಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ 11 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಇವರಿಗೆ ಬಹುಮಾನವಾಗಿ ವಿಮಾನಯಾನದ ಅನುಭವ ನೀಡಲು ಶಾಲೆಯ ಶಿಕ್ಷಕರು ಮುಂದಾಗಿದ್ದಾರೆ.
ಬಹುತೇಕ ವಿದ್ಯಾರ್ಥಿಗಳು ಸಾಮಾನ್ಯ ಹಾಗೂ ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ವಿಮಾನವನ್ನು ಹತ್ತಿರದಿಂದ ನೋಡುವುದೇ ದೊಡ್ಡ ಕನಸಾಗಿತ್ತು. ಆದರೆ ಈಗ ಅದೇ ಮಕ್ಕಳು ವಿಮಾನದಲ್ಲಿ ಪ್ರಯಾಣಿಸಿ ಹೊಸ ಅನುಭವವನ್ನು ಪಡೆದಿದ್ದಾರೆ.